ಗ್ಯಾರಂಟಿ ಸ್ಕೀಮ್ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಬ್ಲ್ಯಾಕ್ ಲಿಸ್ಟ್: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ
ಮಂಗಳೂರು, ಜೂ.23: ಗ್ಯಾರಂಟಿ ಸ್ಕೀಮ್ ಅರ್ಜಿ ಸಲ್ಲಿಕೆ ಉಚಿತವಾಗಿದ್ದು, ಅರ್ಜಿದಾರರಿಂದ ಹಣ ಪಡೆಯುವ ಏಜೆನ್ಸಿಗಳನ್ನು ಬ್ಲ್ಯಾಕ್ ಲಿಸ್ಟ್ ಗೊಳಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.
ನೂತನ ಸರಕಾರದ ಗ್ಯಾರಂಟಿ ಸ್ಕೀಮ್‌ಗಳಿಗೆ ಗ್ರಾಮೀಣವಾಗಿ ಗ್ರಾಮ ವನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಇದಕ್ಕಾಗಿ ಅರ್ಜಿಯೊಂದಕ್ಕೆ 20 ರೂ.ಗಳನ್ನು ಗ್ರಾಮ ವನ್‌ಗೆ ಸರಕಾರವೇ ಪಾವತಿಸುತ್ತದೆ. ಆದರೆ ಅರ್ಜಿದಾರರಿಂದಲೇ 50 ರೂ.ಗಳನ್ನು ಪಡೆಯಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸಭೆಯಲ್ಲಿ ಆಕ್ಷೇಪಿಸಿದ ಬಗ್ಗೆ ಸಚಿವರು ಈ ಪ್ರತಿಕ್ರಿಯೆ ನೀಡಿದರು.
ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗೆ ಚಾಲಕರೇ ನೇಮಕವಾಗಿಲ್ಲ
ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಕುರಿತಾದ ಪ್ರಗತಿ ಪರಿಶೀಲನೆಯ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಗೋವುಗಳ ಸಂರಕ್ಷಣೆಗಾಗಿ ಬಂದಿರುವ ಅನುದಾನ, ಯೋಜನೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಗೋಶಾಲೆಗಳಿದ್ದು, ಇದರಲ್ಲಿ 17 ಖಾಸಗಿ, 2 ಧಾರ್ಮಿಕ ದತ್ತಿ ಇಲಾಖೆ ಹಾಗೂ 1 ಪಶು ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಜಿಲ್ಲೆಯಲ್ಲಿ 107 ಕ್ಲಿನಿಕ್‌ಗಳಿದ್ದು 74 ಮಂದಿ ವೈದ್ಯರಲ್ಲಿ 28 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ೫ ವರ್ಷದಲ್ಲಿ ಹೊಸ ಪಶು ವೈದ್ಯರ ನೇಮಕವಾಗಿಲ್ಲ ಎಂದರು.
ಗೊವುಗಳ ತುರ್ತು ಚಿಕಿತ್ಸೆ ಸ್ಪಂದಿಸುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆಯಡಿ ಒದಗಿಸಲಾದ ಆ್ಯಂಬುಲೆನ್ಸ್‌ಗಳ ಬಗ್ಗೆ ಯು.ಟಿ.ಖಾದರ್ ವಿಚಾರಿಸಿದಾಗ, ದಕ್ಷಿಣ ಕನ್ನಡ ಜಿಲ್ಲೆಗೆ 9 ಅಂಬುಲೆನ್ಸ್‌ಗಳು ಮಂಜೂರಾಗಿದ್ದು, ಇದರ ನಿರ್ವಹಣೆಯನ್ನು ಏಜೆನ್ಸಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಈವರೆಗೆ ಚಾಲಕರ ನೇಮಕವಾಗಿಲ್ಲ ಎಂದು ಉತ್ತರಿಸಿದರು.
ಇದರಿಂದ ಅಸಮಾಧಾನಗೊಂಡ ಯು.ಟಿ.ಖಾದರ್, ಮನುಷ್ಯರ ಹಾಗೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಹೆಸರಿನಲ್ಲಿ ಯೋಜನೆ ತಯಾರಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಏನು ಪ್ರಯೋಜನ ಎಂದ ಅವರು ಈ ಬಗ್ಗೆ ವಿಸ್ತೃತ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒದಗಿಸುವಂತೆ ತಾಕೀತು ಮಾಡಿದರು.
ಶಾಸಕರಾದ ಅಶೋಕ್ ರೈ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷ್ಯಂತ್, ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಅಂಶುಕುಮಾರ್ ಉಪಸ್ಥಿತರಿದ್ದರು.