ಸಮಾಜಕ್ಕಾಗಿ ಬದುಕಿದ್ದರಿಂದ ಸಮಾಜದ ಪ್ರೀತಿ ಸಿಗುವಂತಾಗಿದೆ: ಶಾಸಕ ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ದಿ. ಹಾಜಿ ಮುಸ್ತಾಫ ಕೆಂಪಿಯವರು ಎಲ್ಲಾ ಧರ್ಮವನ್ನು ಒಂದಾಗಿ ಕಾಣುವ ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು. ಮುಸ್ತಾಫ ಅವರು ಸಮಾಜಕ್ಕಾಗಿ ಬದುಕಿದ ವ್ಯಕ್ತಿ. ಆದ್ದರಿಂದ ಈ ಸಮಾಜದಿಂದ ಅವರು ಅಗಲಿದರೂ, ಅವರಿಗೆ ಇಷ್ಟೊಂದು ಜನರ ಪ್ರೀತಿ ಸಿಗುವಂತಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಇತ್ತೀಚೆಗೆ ಅಗಲಿದ ಹಾಜಿ ಮುಸ್ತಾಫ ಕೆಂಪಿ ಅವರಿಗೆ ಉಪ್ಪಿನಂಗಡಿ ನಾಗರಿಕರ ಪರವಾಗಿ ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ಶುಕ್ರವಾರ ಸಂಜೆ ನಡೆದ ಹುಟ್ಟೂರ ಸಂತಾಪ ಸಭೆಯಲ್ಲಿ ಅವರು ನುಡಿನಮನ ಅರ್ಪಿಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಎಲ್ಲರ ಒಡನಾಡಿಯಾಗಿ ಎಲ್ಲರ ಪ್ರೀತಿ ಗಳಿಸಿದ್ದ ಹಾಜಿ ಮುಸ್ತಾಫ ಕೆಂಪಿಯವರ ಮರಣ ಉಪ್ಪಿನಂಗಡಿಗೆ ಬಂದೊದಗಿದ ದುರಂತ. ಇವರು ಮುಸ್ಲಿಂ ಸಮುದಾಯದವರಾಗಿದ್ದರೂ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡುವವರಂತಾಗಿದ್ದರು. ಅವರ ಸಮುದಾಯದವನದ್ದು ತಪ್ಪು ಎಂದಾದರೆ ಅವರು ಅದನ್ನು ಎಂದಿಗೂ ಸಮರ್ಥಿಸದ ಗುಣ ಅವರದ್ದಾಗಿತ್ತು ಎಂದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ವಿಶಿಷ್ಟ ವ್ಯಕ್ತಿತ್ವ, ವಿಶಿಷ್ಟ ನಾಯಕತ್ವ ಗುಣ ಮುಸ್ತಾಫ ಅವರದ್ದಾಗಿದ್ದು, ಅಮಾಯಕರಿಗೆ ಅವಮಾನಗಳಾದಾಗ ಅವರ ಬೆನ್ನೆಲುಬುಬಾಗಿ ಸದಾ ನಿಲ್ಲುತ್ತಿದ್ದ ಅವರು ಹೋರಾಟದ ಗುಣವನ್ನು ಮೈಗೂಡಿಸಿಕೊಂಡವರು. ನೋಡುವಾಗ ನಿಷ್ಠುರವಾಗಿ ಕಂಡರೂ, ಅವರ ಮನಸ್ಸು ಮಾತ್ರ ಮೃದುವಾಗಿತ್ತು ಎಂದರು.
ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ಮುಸ್ತಾಫ ಅವರು ದೈಹಿಕವಾಗಿ ನಮ್ಮ ಬಳಿ ಇರದಿದ್ದರೂ, ನೆನಪಾಗಿ ಮನಸ್ಸಲ್ಲಿ ಎಂದಿಗೂ ಇರುತ್ತಾರೆ. ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದ ಇವರಿಗೆ ಸಾಹಿತ್ಯದ ಬಗ್ಗೆಯೂ ಉತ್ತಮ ಒಲವು, ಜ್ಞಾನವನ್ನು ಹೊಂದಿದ್ದರು ಎಂದರು.
ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡೀಸ್ ಮಾತನಾಡಿ, ಯಾವುದೇ ಜಟಿಲ ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ಬಗೆಹರಿಸಿ ಎಲ್ಲರಿಗೂ ಸಹಮತವಾಗುವಂತೆ ಅದಕ್ಕೊಂದು ಪರಿಹಾರ ಸೂಚಿಸುವ ಶಕ್ತಿ ಮುಸ್ತಾಫ ಹಾಜಿಯವರದ್ದಾಗಿತ್ತು. ಶಾಂತಿಪ್ರಿಯರಾಗಿದ್ದ ಇವರು ಸಮಾಜಕ್ಕಾಗಿ ತನ್ನನ್ನು ಗಂಧದಂತೆ ತೇದಿದವರು. ಸದಾ ಸಮಾಜಕ್ಕಾಗಿಯೇ ಚಿಂತನೆ ನಡೆಸುತ್ತಿದ್ದ ಇವರು ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುವಂತಾಯಿತು ಎಂದರು.
ಉಪ್ಪಿನಂಗಡಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, ಒಂದು ಧಾರ್ಮಿಕ ಸಂಸ್ಥೆಯ ಅಧ್ಯಕ್ಷನಾಗಿದ್ದರೂ, ಧರ್ಮದ ಚೌಕಟ್ಟಿನ ಹೊರಗಿನ ಕ್ಷೇತ್ರಕ್ಕೂ ತನ್ನನ್ನು ಅರ್ಪಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಶೈಕ್ಷಣಿಕ ಹಂತದಲ್ಲಿಯೇ ನಮ್ಮಿಬ್ಬರ ಒಡನಾಟ ಇತ್ತು. ಉತ್ತಮ ಬುದ್ಧಿವಂತನಾಗಿದ್ದ ಇವರು ಎಲ್ಲವನ್ನೂ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿದ್ದರು ಎಂದರು.
ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞ ಮಾತನಾಡಿ, ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದಕ್ಕೆ ಮುಸ್ತಾಫ ಕೆಂಪಿಯವರು ಉದಾಹರಣೆ. ತನಗಿಂತ ತನ್ನವರಿಗಾಗಿ ಬದುಕಿದ ಮುಸ್ತಾಫ ಅವರು ಸದಾ ಸಮಾಜದ ಒಳಿತನ್ನೇ ಚಿಂತಿಸುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ನಿಕಟಪೂರ್ವಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ವೈದ್ಯರಾದ ಡಾ. ನಿರಂಜನ್ ರೈ, ಚಲನಚಿತ್ರ ನಟ, ನಿರ್ದೇಶಕ ಎಂ.ಕೆ. ಮಠ, ಇಂಡಿಯನ್ ಸ್ಕೂಲ್‍ನ ಪ್ರಾಂಶುಪಾಲೆ ಸಂಶಾದ್, ಪ್ರಮುಖರಾದ ಅನಾಸ್ ತಂಙಳ್, ಎಸ್.ಬಿ. ದಾರಿಮಿ, ಉದಯಕುಮಾರ್ ಯು.ಎಲ್., ಉಲ್ಲಾಸ್ ಕೋಟ್ಯಾನ್, ನಝೀರ್ ಮಠ, ರಶೀದ್ ಹಾಜಿ ಶುಕ್ರಿಯಾ, ಅಬೀಬ್ ರ್ರಹ್ಮಾನ್ ಬಿ.ಸಿ.ರೋಡ್, ಇಬ್ರಾಹೀಂ ಮಾತನಾಡಿ ನುಡಿನಮನ ಅರ್ಪಿಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಎ. ಕೃಷ್ಣ ರಾವ್ ಅರ್ತಿಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪ್ರವೀಣ್‍ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಅಶ್ರಫ್ ಬಸ್ತಿಕ್ಕಾರ್, ಕೃಷ್ಣರಾವ್ ಆರ್ತಿಲ, ಅಸ್ಕರ್ ಅಲಿ, ಯೂಸುಫ್ ಪೆದಮಲೆ, ಉದ್ಯಮಿಗಳಾದ ಯು. ರಾಮ, ಶಿವಪ್ರಸಾದ್, ಹೆಚ್. ಯೂಸುಫ್ ಹಾಜಿ, ಝಕಾರಿಯಾ ಕೊಡಿಪ್ಪಾಡಿ, ಐ. ಅಶ್ರಫ್ ಮೈಸೂರ್, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ, ಸಿದ್ದಿಕ್ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.
ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.