ಬೈಂದೂರು: ಸಿಡಿಲು ಬಡಿದು ಜಾನುವಾರು ಮೃತ್ಯು
ಉಡುಪಿ, ಜು.1: ಬೈಂದೂರು ತಾಲೂಕು ಕಂಬದಕೋಣೆ ಗ್ರಾಮದ ದಯಾನಂದ ಜೋಜಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆಗೆ ನಿನ್ನೆ ಸಂಜೆ ಸಿಡಿಲು ಬಡಿದು ಜಾನುವಾರೊಂದು ಮೃತಪಟ್ಟಿದೆ. ಇದರಿಂದ 20,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಅಲ್ಲದೇ ಸಿಡಿಲು ಬಡಿದು ದಯಾನಂದ ಜೋಗಿ ಅವರ ಜಾನುವಾರು ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು 15,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಕಾಪು ತಾಲೂಕು ಎಲ್ಲೂರು ಗ್ರಾಮದ ಗುರುರಾಜ್ ಎಂಬವರ ಮನೆ ಮೇಲೆ ಮರದ ಕೊಂಬೆ ಬಿದ್ದು ಭಾಗಶ: ಹಾನಿಯಾಗಿದ್ದು 40ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 37.4ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಉಡುಪಿಯಲ್ಲಿ 48.9ಮಿ.ಮೀ., ಬ್ರಹ್ಮಾವರದಲ್ಲಿ 44.3, ಕಾಪುವಿನಲ್ಲಿ 51.6, ಕುಂದಾಪುರ 22.1, ಬೈಂದೂರು 35.6, ಕಾರ್ಕಳ 42.4 ಹಾಗೂ ಹೆಬ್ರಿಯಲ್ಲಿ 41.1 ಮಿ.ಮೀ. ಮಳೆಯಾದ ವರದಿ ಬಂದಿದೆ.
ಕರಾವಳಿಗೆ ಸಂಬಂಧಿಸಿದಂತೆ ರವಿವಾರ ಹಾಗೂ ಸೋಮವಾರ ಎಲ್ಲೋ ಅಲರ್ಟ್ ನೀಡಿದ್ದರೆ, ನಂತರ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉಡುಪಿ ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 31.5ಡಿಗ್ರಿ ಸೆ. ಆಗಿದ್ದರೆ, ಕನಿಷ್ಠ ಉಷ್ಣಾಂಶ 23.9 ಡಿಗ್ರಿ ಸೆ. ಇತ್ತು. ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿ ಬೀಸುವ ವಾತಾವರಣ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.