ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಕೇಂದ್ರದ ಸಹಕಾರ ಅಗತ್ಯ: ಮಂಕಾಳ ವೈದ್ಯ

Update: 2023-07-02 15:32 GMT

ಉಡುಪಿ: ಕಡಲ್ಕೊರೆತ ಸಮಸ್ಯೆ ಎಂಬುದು ಕೇವಲ ಒಂದು ಕಡೆ ಸಮಸ್ಯೆ ಅಲ್ಲ. ಕೇರಳದಿಂದ ಗೋವಾವರೆಗೂ ಇದರ ಸಮಸ್ಯೆ ಇದೆ. ಒಂದು ಕಡೆ ಸರಿಯಾದರೆ ಮತ್ತೊಂದು ಕಡೆ ಪ್ರಾರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರ್ಯ ಪೂರ್ಣವಾಗಿ ರಾಜ್ಯ ಸರಕಾರದಿಂದ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕೇಂದ್ರ ಸರಕಾರದ ಬೆಂಬಲ ಕೂಡ ಅಗತ್ಯವಾಗಿ ಬೇಕು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.

ಸಾಸ್ತಾನ ಕೋಡಿಕನ್ಯಾಣ ಕಡಲ್ಕೊರೆತ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಈ ಸಂಬಂಧ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು. ರಾಜ್ಯ ಸರಕಾರಕ್ಕೆ ಸಾಧ್ಯವಾಗು ವಷ್ಟು ಹಂತಹಂತವಾಗಿ ಕಾಮಗಾರಿಯನ್ನು ನಡೆಸಲಾ ಗುವುದು. ಕೊರತೆ ಮತ್ತೆ ಮರುಕಳಿಸದ ರೀತಿಯಲ್ಲಿ ಕಾಮಗಾರಿ ಮಾಡಲಾಗುವುದು. ಕಡಲ್ಕೊರೆತ ಸಂಬಂಧ ಸದ್ಯಕ್ಕೆ ನಮ್ಮ ಇಲಾಖಾ ತಂಡವನ್ನು ಕಳುಹಿಸಿ ಎಲ್ಲಿ ಅಗತ್ಯ ಇದೆಯೋ ಅಲ್ಲಿ ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗುವುದು ಎಂದರು.

ಕೋಡಿಕನ್ಯಾಣ ಬಂದರಿನಲ್ಲಿ ಮೀನುಗಾರರು ತುಂಬಾ ಕಷ್ಟ ಪಡುತ್ತಿದ್ದಾರೆ. ಬೋಟು ನಿಲ್ಲಿಸಿದರೂ ಕಾಯುವ ಪರಿಸ್ಥಿತಿ ಬಂದಿದೆ. ಈಗ ರಜೆ ಇದ್ದರೂ ಇವರು ಮನೆಗೆ ಹೋಗದ ಸ್ಥಿತಿಯಲ್ಲಿ ಇಲ್ಲಿ ಇದೆ. ಇಲ್ಲಿ ಹೊಳೆತ್ತುವ ಸೇರಿದಂತೆ ಅಗತ್ಯ ಇರುವ ಎಲ್ಲ ಕಾರ್ಯಗಳನ್ನು ನಡೆಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲಾಗುವುದು. ನಾವು ಬಡವರ ಹಾಗೂ ಮೀನುಗಾರರ ಪರವಾಗಿ ಇದ್ದೇವೆ. ಪ್ರಥಮ ಆದ್ಯತೆಯಲ್ಲಿ ತೆದಗೆದುಕೊಂಡು ಕಾಮಗಾರಿಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಪಡಿತರದಲ್ಲಿ ಇತರ ಧಾನ್ಯಗಳನ್ನು ಕೊಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಡಿತರದಲ್ಲಿ ಉಳಿದ ಅಕ್ಕಿ ಬದಲು ಹಣ ಕೊಡುವ ಕೆಲಸವನ್ನು ಸರಕಾರ ಮಾಡುತ್ತದೆ. ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮ ಸರಕಾರ ಕಾರ್ಯ ಮಾಡುತ್ತದೆ. ಹಣದ ಬದಲು ಪೂರ್ತಿ ಅಕ್ಕಿ ಕೊಡಲು ಕೂಡ ನಾವು ಸಿದ್ಧರಿದ್ದೇವೆ. ಬದಲಾವಣೆ ಬೇಕಾದರೂ ಮಾಡುತ್ತೇವೆ. ಜನರ ಅಭಿಪ್ರಾಯಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಜಿ.ಶಂಕರ್, ಆನಂದ ಕುಂದರ್, ಮೀನುಗಾರಿಕೆ ಮತ್ತು ಬಂದರು ಇಲಾಖಾಧಿಕಾರಿಗಳು ಹಾಜರಿದ್ದರು. ಬಳಿಕ ಸಚಿವರು ಹಂಗಾರಕಟ್ಟೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಅಲ್ಲಿಂದ ಸಚಿವ ಮಂಕಾಳ ವೈದ್ಯ ಕಾಪು ಲೈಟ್‌ಹೌಸ್ ಹಾಗೂ ಮೂಳೂರು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾಧಿಕಾರಿ ಕೂರ್ಮಾ ರಾವ್, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News