ಗೌರವಧನ ಏರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಧರಣಿ

Update: 2023-07-11 16:02 GMT

ಮಂಗಳೂರು, ಜು.11: ಗೌರವಧನ ಏರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಮಂಗಳೂರು ತಾಲೂಕು ಪಂಚಾಯತು ಕಚೇರಿ ಬಳಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜಿಲ್ಲಾಧ್ಯಕ್ಷೆ ಭವ್ಯಾ ಅವರು ಅಕ್ಷರ ದಾಸೋಹ ನೌಕರರ ಮಾಸಿಕ ಗೌರವ ಧನವನ್ನು ರೂ. 12, 000ಕ್ಕೆ ಏರಿಸಬೇಕು. ಕೂಡಲೇ ರೂ. 6000ನ್ನಾದರೂ ಕರ್ನಾಟಕ ರಾಜ್ಯ ಸರಕಾರ ನೀಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಸರಕಾರ ತನ್ನ ಕೊನೆಯ ಬಜೆಟ್‌ನಲ್ಲಿ ರೂ. 1, 000ವನ್ನು ಏರಿಕೆ ಮಾಡಿದ ಘೋಷಣೆಗೆ ಆದೇಶಪತ್ರ ಹೊರಡಿಸಿಲ್ಲ.ಮಾತ್ರವಲ್ಲದೆ ರಾಜ್ಯದಲ್ಲಿ ಸುಮಾರು 6, 000 ಮಂದಿ ಬಿಸಿಯೂಟ ಕಾರ್ಮಿಕರಿಗೆ 60ವರ್ಷ ಆಗಿದೆ ಎಂಬ ಕಾರಣ ನೀಡಿ ಕೆಲಸದಿಂದ ಬಿಡುಗಡೆ ಮಾಡಿದೆ. ಆದರೆ ಅವರಿಗೆ ಪಿಂಚಣಿಯಾಗಲೀ ಇಡಿಗಂಟಾಗಲಿ ನೀಡಿಲ್ಲ.ಅವರುಗಳಿಗೆ ಇಡಿಗಂಟು 1ಲಕ್ಷ ನೀಡಬೇಕು ಇಲ್ಲದಿದ್ದಲ್ಲಿ ಅವರನ್ನು ಕೆಲಸದಿಂದ ಬಿಡುಗಡೆ ಮಾಡಬಾರದು ಎಂದರು.

ಬಿಸಿಯೂಟ ಕಾರ್ಮಿಕರು ಮೃತಪಟ್ಟರೆ ಅವರ ಮಕ್ಕಳಿಗೆ ಬಿಸಿಯೂಟ ಕಾರ್ಮಿರಾಗಿ ಕೆಲಸ ನೀಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ ಅಕ್ಷರ ದಾಸೋಹ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕ ರಣ ಮಾಡಬಾರದು. ಶಿಕ್ಷಣ ಇಲಾಖೆಯ ಸುಪರ್ಧಿಯಲ್ಲಿಯೇ ಈ ಯೋಜನೆ ನಡೆಯಬೇಕು. ಪ್ರತಿಶಾಲೆಯಲ್ಲಿ ಕನಿಷ್ಠ ಇಬ್ಬರು ಕಾರ್ಮಿಕರು ಬಿಸಿಯೂಟ ಕೆಲಸಕ್ಕೆ ಇರಲೇ ಬೇಕು. ಈ ಯೋಜನೆ ಯಶಸ್ವಿಗೊಂಡರೆ ಮಕ್ಕಳ ಆರೋಗ್ಯ ಮತ್ತು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಲಿದೆ ಎಂದು ಅವರು ಹೇಳಿದರು.

ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಕಾರಿ ಮನವಿಯನ್ನು ಸ್ವೀಕರಿಸಿ ರಾಜ್ಯದ ಮುಖ್ಯ ಮಂತ್ರಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಮುಂದಾಳುಗಳಾದ ರೇಖಲತಾ,ಶಬಾನ ಬಾನು, ಯಶೋಧ,ಅರುಣ, ಲಲಿತ,ಆಸ್ಮಾ ಮುಂತಾದವರು ವಹಿಸಿದ್ದರು. ಮಂಗಳೂರು,ಮೂಡುಬಿದಿರೆ,ಉಳ್ಳಾಲ ಮತ್ತು ಸುಳ್ಯದಲ್ಲಿ ಧರಣಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News