ಕಾನತ್ತೂರಿಗೆ ಪ್ರಮಾಣ ಮಾಡಲು ಬನ್ನಿ: ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಳಗಕ್ಕೆ ಆಹ್ವಾನ

Update: 2023-06-30 15:17 GMT

ಮಂಗಳೂರು: ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣದಲ್ಲಿ ನಮ್ಮ ಮೇಲೆ ಆರೋಪ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಜನರು ತುಳುನಾಡಿನ ಆರಾಧ್ಯ ಕ್ಷೇತ್ರವಾದ ಕಾನತ್ತೂರು ಕ್ಷೇತ್ರಕ್ಕೆ 10ದಿನದೊಳಗೆ ಪ್ರಮಾಣಕ್ಕೆ ಬರಲಿ ಎಂದು ಬೆಳ್ತಂಗಡಿಯ ಧೀರಜ್ ಜೈನ್ ಆಹ್ವಾನ ನೀಡಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇ ಯಾವ ದಿನ ಅಂತ ಹೇಳಲಿ, ನಾವು ದೈವದ ಸಮ್ಮುಖದಲ್ಲಿ ಸೌಜನ್ಯ ಕೊಲೆ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ ಎಂದು ಪ್ರಮಾಣ ಮಾಡುತ್ತೇವೆ. ಅವರು ಕೂಡ ತಾವು ನಂಬಿರುವ ಸತ್ಯವನ್ನು ಹೇಳಿ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

2014ರಲ್ಲಿ ಸಿಐಡಿ ಸಿಬಿಐ ತನಿಖಾ ಸಂಸ್ಥೆ ನಮ್ಮನ್ನು ಎರಡೆರಡು ಬಾರಿ ತನಿಖೆ ನಡೆಸಿದೆ. ಸಿಬಿಐ ತಂಡ ನಮ್ಮ ರಕ್ತ ಪರೀಕ್ಷೆ, ಡಿಎನ್‌ಎ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್), ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಧಿವಿಧಾನ ಅನುಸರಿಸಿ ತನಿಖೆ ಮಾಡಿರುತ್ತಾರೆ. ನಮಗೆ ಎಷ್ಟು ಕಷ್ಟವಾದರೂ ತೊಂದರೆಯಿಲ್ಲ, ಅಮಾಯಕ ಹೆಣ್ಣು ಮಗಳೊಬ್ಬಳ ಸಾವಿಗೆ ನ್ಯಾಯ ಸಿಗಲಿ ಎಂಬ ನಿಟ್ಟಿನಲ್ಲಿ ಸಹಕಾರ ನೀಡಿದ್ದೆವು. 2015ರ ಸಿಬಿಐ ಚಾರ್ಜ್‌ಶೀಟ್‌ನಲ್ಲೂ ನಮ್ಮನ್ನು ಎಲ್ಲೂ ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಇಷ್ಟೆಲ್ಲ ತನಿಖೆಯಾಗಿ ಸಿಬಿಐ ಕೋರ್ಟ್ ನಮ್ಮನ್ನು ನಿರಪರಾಧಿಗಳೆಂದು ಆದೇಶ ನೀಡಿದ್ದರೂ ವಿನಾ ಕಾರಣ ನಮ್ಮ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬಳಿಕವೂ ಕೆಲವರು ಧರ್ಮಸ್ಥಳ ಕ್ಷೇತ್ರ ಹಾಗೂ ಜೈನ ಸಮುದಾಯದದ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ದುರುದ್ದೇಶದಿಂದ ಜೈನ ಸಮಾಜದ ವಿರುದ್ಧ ಮಾಡುತ್ತಿರುವ ದಾಳಿಯನ್ನು ಸಹಿಸುವುದಿಲ್ಲ. ಅಗತ್ಯ ಬಿದ್ದರೆ ಕಾನೂನು ಹೋರಾಟ ಕೂಡ ಮಾಡುತ್ತೇವೆ. ಪ್ರಕರಣದಲ್ಲಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿರುವುದಾಗಿ ಮಾಜಿ ಸಚಿವ ಅಭಯಚಂದ್ರಜೈನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕ್ ಜೈನ್, ಉದಯ ಜೈನ್ ಉಪಸ್ಥಿತರಿದ್ದರು.

Full View
Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News