ಗ್ಯಾರಂಟಿ ಯೋಜನೆ ಜಾರಿಯಲ್ಲಿ ಕಾಂಗ್ರೆಸ್ ಮೋಸದಾಟ: ಮಹಾವೀರ ಹೆಗ್ಡೆ
ಕಾರ್ಕಳ: ಕಾಂಗ್ರೆಸ್ ಸರಕಾರ ಈ ಬಾರಿ ಅಧಿಕಾರಕ್ಕೆ ಬರಬೇಕೆಂಬ ಹಿನ್ನೆಲೆಯಲ್ಲಿ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿತ್ತು. ಇದೀಗ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ನೀಡಲು ಮೋಸದಾಟವಾಡುತ್ತಿದ್ದು ಕೇಂದ್ರ ಸರಕಾರದ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಸೇರಿಸುವಾಗ ಕೇಂದ್ರದ ಅನುಮತಿ ಪಡೆಯಬೇಕೆಂದು ಕಾಂಗ್ರೆಸಿಗರಿಗೆ ತಿಳಿದಿಲ್ಲವೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಕೊಟ್ಟು ಕಸಿದುಕೊಳ್ಳುವ ನೀತಿ ಅನುಸರಿಸುತ್ತಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಉಚಿತ ನೀಡಿದಂತೆ ನಾಟಕವಾಡುತ್ತಿರುವ ಕಾಂಗ್ರೆಸ್ ಇನ್ನೊಂದೆಡೆ ವಿದ್ಯುತ್ ದರ ಮತ್ತು ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಆ ಹಣವನ್ನು ವಾಪಾಸ್ಸು ಪಡೆದಿದ್ದಾರೆ. ಈ ರೀತಿ ಜನರಿಗೆ ವಂಚಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗುವುದಿಲ್ಲವೇ ? ಜನರಿಗೆ ಕೊಡುವ ಸಮಯದಲ್ಲಿ ಮಾಡುವ ಸದ್ದು, ಕಿತ್ತುಕೊಳ್ಳುವಾಗ ಯಾಕೆ ಇರುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ವಿದ್ಯುತ್ ದರವನ್ನು ಮೆಲ್ಲಗೆ ಏರಿಸಿ ಬೆಲೆ ಏರಿಕೆಯ ಆರೋಪವನ್ನು ಬಿಜೆಪಿ ಸರಕಾರದ ಮೇಲೆ ಹೊರಿಸಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಕೆಇಆರ್‌ಸಿ ಪ್ರಸ್ತಾವನೆ ಇಟ್ಟಿತ್ತು. ಆದರೆ, ಅನುಮತಿ ನೀಡಿರಲಿಲ್ಲ, ಇದನ್ನು ಜನ ಗಮನಿಸಬೇಕಾಗಿದೆ. ಇನ್ನು ಸದ್ದಿಲ್ಲದೆ ಮದ್ಯದ ದರ ಸಹ ಏರಿಸಿದ್ದು ಈ ಮೂಲಕವೂ ಜನರ ಆದಾಯವನ್ನು ಕಸಿದುಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ, ಜಾಗದ ರಿಜಿಸ್ಟ್ರೇಶನ್ ಸಂಬಂಧಿಸಿದಂತೆ ಟ್ಯಾಕ್ಸ್ ದರ ಏರಿಸಲಿದ್ದು, ಜನತೆ ಕಷ್ಟದ ಜೀವನ ನಡೆಸುವಂತೆ ಹುನ್ನಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.