ಸುಳ್ಯ: ಕಾರಿಗೆ ಕಂಟೈನರ್ ಲಾರಿ ಢಿಕ್ಕಿ: ಓರ್ವ ಮೃತ್ಯು, ನಾಲ್ವರು ಗಂಭೀರ
ಸುಳ್ಯ, ಜೂ21: ಕಾರಿಗೆ ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಐವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸಂಪಾಜೆ ಸಮೀಪ ದೇವರಕೊಲ್ಲಿ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ ನಿವಾಸಿ ರವಿ ಎಂದು ಗುರುತಿಸಲಾಗಿದೆ.
ಲಾರಿ ಚಾಲಕ ಮಂಗಳೂರಿನ ಕುಳಾಯಿ ನಿವಾಸಿ ಈಶ್ವರ (42), ಕಾರಿನಲ್ಲಿದ್ದ ಪ್ರಯಾಣಿಕರಾದ ಚಂದ್ರಶೇಖರ, ನಿತಿನ್, ಜಗದೀಶ್ ಹಾಗೂ ಹರ್ಷ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಈಶ್ವರ, ಚಂದ್ರಶೇಖರ ಮತ್ತು ನಿತಿನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯ ಬ್ರೇಕ್ ವೈಫಲ್ಯಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ರವಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಾರಿನಲ್ಲಿದ್ದವರು ಬೆಂಗಳೂರಿನಿಂದ ಮೈಸೂರು ಮೂಲಕ ಧರ್ಮಸ್ಥಳಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಕಾರು ಹಾಗೂ ಕಂಟೈನರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.