ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಭಾರೀ ಮಳೆ, ವಿವಿಧೆಡೆ ಹಾನಿ
ಬಂಟ್ವಾಳ : ತಾಲೂಕಿನಲ್ಲಿ ಸೋಮವಾರದಿಂದ ನಿರಂತರ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರಿನ ಮಟ್ಟ ಗುರುವಾರ 3.7 ಮೀಟರ್ ಗೆ ಏರಿಕೆಯಾಗಿದೆ. ಬಾಳ್ತಿಲ ಗ್ರಾಮದ ಕಲ್ಲಡ್ಕ ನಿವಾಸಿ ವಸಂತ ಆಚಾರ್ಯ ಅವರ ಮನೆಯ ಕಂಪೌಂಡ್ ಶ್ರೀರಾಮ ಶಾಲೆಯ ಆಟದ ಮೈದಾನದ ಆವರಣಕ್ಕೆ ಬಿದ್ದಿರುತ್ತದೆ. ನಾವೂರು ಗ್ರಾಮದ ಪೂಪಡಿಕಟ್ಟೆ ಎಂಬಲ್ಲಿ ರಸ್ತೆ ಬದಿ ಧರೆ ಕುಸಿದಿದ್ದು ಲೋಕೋಪಯೋಗಿ ಇಲಾಖೆಯೊಂದಿಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಮನೆಯ ಸ್ಥಳಾಂತರ ದ ಬಗ್ಗೆ ತಿಳುವಳಿಕೆ ಪತ್ರ ನೀಡಿದ್ದಾರೆ.
ಬಡಗ ಕಜೆಕಾರು ಗ್ರಾಮದ ಕೋಮಿನಡ್ಕ ಎಂಬಲ್ಲಿರುವ ಇಸುಬ ಬ್ಯಾರಿ ರವರ ಮನೆಗೆ ಆವರಣದ ಗೋಡೆ ಕುಸಿದು ಬಿದ್ದು ಮನೆಗೆ ಹಾನಿಯಾಗಿರುತ್ತದೆ. ಕೊಳ್ನಾಡು ಗ್ರಾಮದ ತಾಮರಾಜೆ ಎಂಬಲ್ಲಿ ಉಮಾವತಿ ರವರ ಮನೆಯ ಗೋಡೆಗೆ ಕಂಪೌಂಡ್ ಕುಸಿದು ತೀವ್ರ ಹಾನಿಯಾಗಿರುತ್ತದೆ.
ಪುದು ಗ್ರಾಮದ ಕಬೆಲ ನಿವಾಸಿ ಶರ್ಮಿಳಾ ಅವರ ಮನೆಯ ಗೋಡೆ ಕುಸಿದಿದ್ದು ಇದೀಗ ಮನೆ ಕುಸಿದು ಬೀಳುವ ಸಾಧ್ಯತೆ ಇರುತ್ತದೆ ಅವರನ್ನು ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿದ್ದು ಅವರು ಸಂಬಂದಿಕರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ ಎಂದು ತಾಲೂಕು ಪ್ರಾಕೃತಿಕ ವಿಕೋಪ ಕೇಂದ್ರದ ಮಾಹಿತಿ ಲಭ್ಯವಾಗಿದೆ. ಕರಿಯಂಗಳ ಗ್ರಾಮದ ಸಲಾಂ ಎಂಬವರ ಮನೆಯ ಹಿಂಬದಿಯ ಮಣ್ಣು ಕುಸಿದು ಮನೆಗೆ ಬಾಗಶ ಹಾನಿಯಾಗಿದೆ
ಸಂಗಬೆಟ್ಟು ಗ್ರಾಮದ ಕುಮಾರೊಟ್ಟು ನಿವಾಸಿ ದೇಜಪ್ಪ ಮೂಲ್ಯ ಎಂಬವರ ಮನೆಗೆ ತೀವ್ರ ಹಾನಿಯಾಗಿದ್ದು ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ. ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಶೀನಪ್ಪ ಮೂಲ್ಯ ಅವರ ಮನೆಗೆ ತೀವ್ರ ಹಾನಿಗೊಂಡಿದ್ದು ಅವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿರುತ್ತಾರೆ. ಅರಳ ಗ್ರಾಮದ ಬೇಬಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ಜೈನಾಬ್ ಎಂಬವರ ಮನೆ ಪಕ್ಕದ ತಡೆಗೋಡೆ ಕುಸಿದು ಪಕ್ಕದ ಮನೆಯ ಹಲೀಮಾ ರವರ ಮನೆ ಗೋಡೆ ಮೇಲೆ ಬಿದ್ದು ಎರಡೂ ಮನೆಗಳು ತೀವ್ರ ಹಾನಿಯಾಗಿರುತ್ತದೆ. ಎರಡೂ ಮನೆಯವರು ಪಕ್ಕದ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಿರುತ್ತಾರೆ.
ನೆಟ್ಲಮುಡ್ನೂರು ಗ್ರಾಮ ನೇರಳಕಟ್ಟೆ ಸರಕಾರಿ ಪ್ರಾಥಮಿಕ ಶಾಲಾ ಮೈದಾನದ ಆವರಣ ಗೋಡೆ ಕುಸಿದು ಬಿದ್ದಿದೆ. ಅಲಂಗಾಜೆ ಘನತ್ಯಾಜ್ಯ ಘಟಕದ ಬಳಿ ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.