ಗ್ರಾ.ಪಂ. ಸದಸ್ಯರ ಆಸ್ತಿ ಘೋಷಣೆ ಅನಿವಾರ್ಯ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಸಕಾಲದಲ್ಲಿ ಸಲ್ಲಿಸುವುದು ಅನಿವಾರ್ಯ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಪಂಚಾಯತ್ ಸದಸ್ಯರು ತಮ್ಮ ಆಸ್ತಿ ವಿವರವನ್ನು ಸಕಾಲದಲ್ಲಿ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಸದಸ್ಯತ್ವ ಅನರ್ಹಗೊಳಿಸಿದ ವಿಚಾರದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯರ ಆಸ್ತಿ ಹೊಣೆಗಾರಿಕೆ ಘೋಷಣೆ ವಿಚಾರದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡುವುದು ಅನಿವಾರ್ಯ ಎಂದು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರತಿ ಸದಸ್ಯನು ತನ್ನ ಪದಾವಧಿ ಪ್ರಾರಂಭವಾದ ದಿನದಿಂದ 3 ತಿಂಗಳ ಒಳಗೆ ಮತ್ತು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಸದಸ್ಯರ ಅಧಿಕಾರವಧಿ ಮುಗಿಯುವ ತನಕ, ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ ಒಳಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಯ ಮೂಲಕ ಆಸ್ತಿ ವಿವರ ದಾಖಲಿಸತಕ್ಕದ್ದು ಎಂಬ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕರಣ 43 ಬಿ ಯನ್ನು ಉಲ್ಲೇಖಿಸಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.
ಕೋಟ ಶ್ರೀನಿವಾಸ ಪೂಜಾರಿ ಅವರು, ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ 93,000ಕ್ಕೂ ಅಧಿಕವಿರುವ ಗ್ರಾಮ ಪಂಚಾಯತ್ ಸದಸ್ಯರು, ಅದರಲ್ಲಿ ಶೇ.50ರಷ್ಟು ಮಹಿಳೆಯರು ಶೇ.25 ರಷ್ಟು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದಿಂದ ಬಂದವರು. ಬಹುತೇಕ ಬಡವರೇ ಮೀಸಲಾತಿ ಆಧಾರದಲ್ಲಿ ಗೆದ್ದು ಬಂದಿದ್ದು, ಅನೇಕರಿಗೆ ಅನುಭವದ ಹಾಗೂ ಮಾಹಿತಿಯ ಕೊರತೆ ಇರುತ್ತದೆ. ಅವರನ್ನು ಇಂತಹ ಒಂದು ವಿಚಾರಕ್ಕೆ ಕೂಡಲೇ ಅವರ ಸದಸ್ಯ ಸ್ಥಾನದಿಂದ ತೆಗೆದು ಹಾಕಬಾರದು ಎಂದು ಸದನದ ಗಮನ ಸೆಳೆದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993 ಪ್ರಕರಣ 43-ಬಿ ಯಲ್ಲಿ ತಿಳಿಸಿದಂತೆ, ಗ್ರಾಮ ಪಂಚಾಯತ್ ಸದಸ್ಯರ ಚರ ಮತ್ತು ಸ್ಥಿರ ಆಸ್ತಿ 2 ಲಕ್ಷವನ್ನು ಮೀರಿದರೆ ಮಾತ್ರ ಅನ್ವಯವಾಗುತ್ತದೆ. ಅಲ್ಲದೇ, ಪ್ರತಿ ಆರ್ಥಿಕ ವರ್ಷದ ಮೇ ತಿಂಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವ ಸದಸ್ಯ ಆಸ್ತಿ ಘೋಷಣೆಯನ್ನು ಮಾಡಿಲ್ಲವೋ ಆ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು ಚುನಾವಣಾ ಆಯುಕ್ತರ ಮುಂದೆ ಗ್ರಾಮ ಪಂಚಾಯತ್ ಸದಸ್ಯರು ಅವರ ಅಹವಾಲನ್ನು ಹೇಳಿಕೊಂಡ ನಂತರ ಕಾರಣಗಳಿದ್ದರೆ ಮಾತ್ರ ಗ್ರಾಮ ಪಂಚಾಯತ್ ಸದಸ್ಯನನ್ನು ಆಸ್ತಿ ಘೋಷಣೆ ಮಾಡಿಲ್ಲವೆಂದು ತೆಗೆದು ಹಾಕಬಹುದು ಎಂದರು.
ಸಕಾಲದಲ್ಲಿ ಆಸ್ತಿ ವಿವರ ಸಲ್ಲಿಸದಿರುವ ಸದಸ್ಯರ ಸದಸ್ಯತ್ವ ರದ್ದು ಮಾಡಲು ನಿರ್ಧರಿಸಿದರೆ ಸಂಧಾನದ 73ನೇ ತಿದ್ದುಪಡಿಯ ಒಟ್ಟು ಆಶಯಕ್ಕೆ ಧಕ್ಕೆ ಬರುತ್ತದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ಬಡವರ ಮಧ್ಯೆ ಕೆಲಸ ಮಾಡಿಕೊಂಡು ಸದಸ್ಯತ್ವದ ಜವಾಬ್ದಾರಿ ನಿರ್ವಹಿಸುವ ಅನೇಕರು ಬಿಪಿಎಲ್ ಕುಟುಂಬಕ್ಕೆ ಸೇರಿದವರಾಗಿದ್ದು, ಇಂತಹ ಸಂದರ್ಭದಲ್ಲಿ ಆಸ್ತಿ ವಿವರ ಘೋಷಣೆ ರದ್ದುಪಡಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದರು.