ಆದಿವಾಸಿಗಳ ಸಮಸ್ಯೆ ಚರ್ಚಿಸಲು ಸಿಎಂ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಗೆ ಆಗ್ರಹ

Update: 2023-07-09 15:02 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಉಡುಪಿ, ಜು.9: ಆದಿವಾಸಿ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರವು ಸಮುದಾಯಗಳು, ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೂಡಲೇ ಕರೆಯಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಒತ್ತಾಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2023- 24 ನೇ ಸಾಲಿನ ಆಯವ್ಯಯವನ್ನು ಸಮಿತಿಯು ವಿಮರ್ಶಾತ್ಮಕವಾಗಿ ಸ್ವಾಗತಿಸಿದೆ. ಬಜೆಟ್‌ನಲ್ಲಿ ಆದಿವಾಸಿ ಸಮುದಾಯಗಳ ಬಹುದಿನಗಳ ಮುಖ್ಯ ಬೇಡಿಕೆಯಾದ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಉಪಯೋಜನೆಗೆ ಹಣವನ್ನು ಇತರೆ, ಉದ್ದೇಶಗಳಿಗೆ ಮತ್ತು ಇತರೆ ಇಲಾಖೆಗಳ ಬಳಕೆಗೆ ಅವಕಾಶ ಮಾಡಿಕೊಡುತ್ತಿದ್ದ ಕಾಯ್ದೆಯ 7- ಡಿ ಪರಿಚ್ಛೇದವನ್ನು ಕೈ ಬಿಟ್ಟಿರುವುದು ಅತ್ಯಂತ ಸ್ವಾಗತಾರ್ಹ ಎಂದು ಸಮಿತಿ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿಸಿರುವ ದಲಿತ-ಬುಡಕಟ್ಟು ಉಪ ಯೋಜನೆ-ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಗೆ ಈ ಬಜೆಟ್‌ನಲ್ಲಿ 34,294 ಕೋಟಿ ರೂ.ಗಳನ್ನು ಒದಗಿಸಿರುವುದು ಅಂದರೆ ಹಿಂದಿನ ಬಜೆಟ್‌ಗಿಂತ 4000 ಕೋಟಿ ರೂ.ಗಳನ್ನು ಹೆಚ್ಚಿಗೆ ನೀಡಿದ್ದಾರೆ. ಪೂರ್ಣ ಹಣವನ್ನು ಈ ಸಮುದಾಯಗಳ ಅಭಿವೃದ್ದಿಗೆ, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ವಿನಿಯೋಗಿಸಬೇಕು. ಅದಕ್ಕೆ ತಕ್ಕುದಾದ ಪ್ರಾಯೋಗಿಕ ಕಾರ್ಯ ಯೋಜನೆಯನ್ನು ಸಮುದಾಯಗಳ ಪ್ರತಿನಿಧಿಗಳು, ಸಂಘಟನೆಗಳೊಂದಿಗೆ ಸಮಾಲೋಚಿಸಿ ರೂಪಿಸಬೇಕು ಎಂದು ಆಗ್ರಹಿಸಿದೆ.

ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಸಣ್ಣ ಅಂದರೆ ಸುಮಾರು 210ಕ್ಕೂ ಕಡಿಮೆ ಕುಟುಂಬಗಳು ಇರುವ ಹಸಲ ಸಮುದಾಯದ ಅಭಿವೃದ್ಧಿಗೆ ಕ್ರಮವಹಿಸ ಬೇಕು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರಿಗೆ ಹಸಲರು ಪರಿಶಿಷ್ಟ ಪಂಗಡ ಎಸ್‌ಸಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಹಸಲ ಪರಿಶಿಷ್ಟ ಜಾತಿ ಎಸ್‌ಟಿ ಪ್ರಮಾಣ ಪತ್ರ ನೀಡಲಾಗಿದೆ.

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಆದಿವಾಸಿಗಳ ಪ್ರದೇಶದಲ್ಲಿ ಜಿಲ್ಲೆಯ ಗಡಿ ಗುರುತುಗಳ ಸಮಸ್ಯೆಗಳಿವೆ. ಹಳ್ಳಿಹೊಳೆ ಕಟ್ಟಿನಾಡಿ ಪ್ರದೇಶ ಶಿವಮೊಗ್ಗ, ಉಡುಪಿ ಜಿಲ್ಲೆಯ ಗಡಿಯ ಕುರಿತು ನಿಖರತೆ ಇಲ್ಲದೆ ಎರಡು ಜಿಲ್ಲೆಯ ಜಿಲ್ಲಾಡಳಿತ ಇವರನ್ನು ಭೂಮಿ ಹಕ್ಕಿನಿಂದ ವಂಚಿತರಾಗಿ ಮಾಡಿದೆ. ಮಹಮ್ಮದ್ ಪೀರ್ ವರದಿ ಪ್ರಕಾರ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿಯನ್ನು ನೀಡಲು ಕ್ರಮ ವಹಿಸಬೇಕು. ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಾಸ್ಟೆಲ್‌ಗಳ ಅವ್ಯವಸ್ಥೆ ಸರಿಪಡಿಸಬೇಕು. ನಿರ್ಮಾಣ ಹಂತದಲ್ಲಿರುವ ಹೊಸ ಹಾಸ್ಟೆಲ್ ಗಳು ಕೂಡಲೇ ವಿದ್ಯಾರ್ಥಿಗಳ ಉಪಯೋಗಕ್ಕೆ ಸಿಗುವಂತೆ ಆಗಬೇಕು ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News