ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಮರು ತನಿಖೆಗೆ ಮೈಸೂರಿನ ಒಡನಾಡಿ ಸಂಸ್ಥೆ ಒತ್ತಾಯ

Update: 2023-07-04 12:49 GMT

ಬೆಳ್ತಂಗಡಿ; ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆಗೆ ಒತ್ತಾಯಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯಳಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟವನ್ನು ಕೈಗಳ್ಳುವುದಾಗಿ ಪ್ರಕಟಿಸಿದೆ.

ಧರ್ಮಸ್ಥಳ ಪಾಂಗಳದ ಸೌಜನ್ಯಳ ಮನೆಗೆ ಭೇಟಿ ನೀಡಿದ ಒಡನಾಡಿ ಸಂಸ್ಥೆಯ ಕೆ.ವಿ.ಸ್ಟಾನ್ಲಿ ಹಾಗೂ ಪರಶುರಾಮ್ ಅವರು ಕುಟುಂಬಸ್ಥರೊಂದಿಗೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ರೀತಿಯ ಹೋರಾಟಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಮಾದ್ಯಮದವರೊಂದಿಗೆ ಮಾತನಾಡಿದ ಸ್ಟಾನ್ಲಿ ಹಾಗೂ ಪರಶುರಾಮ್ ಅವರು ಈ ಪ್ರಕರಣದ‌ ಬಗ್ಗೆ ಹಿಂದಿನಿಂದಲೂ ಗಮನಿಸುತ್ತಾ ಬಂದಿದ್ದೇವೆ ಇದೀಗ ಸಿಬಿಐ ಆರೋಪಿಯೆಂದು ಬಂಧಿಸಿದ್ದ ಸಂತೋಷ್ ರಾವ್ ನನ್ನು ನ್ಯಾಯಾಲಯವು ಬಿಡುಗಡೆಗೊಳಿಸಿದೆ. ಇದೀಗ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿ ಯಾರು ಎಂದು ಪತ್ತೆಹಚ್ಚುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿ ಪ್ರಕರಣದ ಮರು ತನಿಖೆ ನಡೆಯಬೇಕಾಗಿದೆ. ಸಿಬಿಐಯ ಗೌರವ ಉಳಿಯಬೇಕಾದರೆ ಮರು ತನಿಖೆ ನಡೆದು ಆರೋಪಿ ಯಾರೆಂದು ಪತ್ತೆ ಹಚ್ಚಬೇಕಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಕಾನೂನು ಹೋರಾಟಗಳನ್ನೂ ನಡೆಸಲಾಗುವುದು. ಅದಕ್ಕಾಗಿ ಕಾನೂನು ತಜ್ಞರುಗಳ ಸಹಾಯವನ್ನು ಪಡೆಯಲಾಗುವುದು.

ಆರೋಪಿಗಳು ಎಷ್ಟೇ ಪ್ರಬಲರಾಗಿರಲಿ, ಅವರನ್ನು ಕಾನೂನಿನ ಮುಂದೆ ತರಬೇಕಾದ ಅಗತ್ಯವಿದೆ. ಸೌಜನ್ಯಳ ತಾಯಿಗೆ ನ್ಯಾಯ ಕೊಡಿಸುವ ವರೆಗೂ ಹೋರಾಟ ಮುಂದುವರಿಯಲಿದೆ. ಯಾವುದೇ ಬೇಧಗಳಿಲ್ಲದೆ ಕರ್ನಾಟಕದ ಜನರೂ ನ್ಯಾಯಕ್ಕಾಗಿನ ಈ ಹೋರಾಟವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News