ರಾಜ್ಯ ಬಜೆಟ್‌ನಲ್ಲಿ ಸಮುದಾಯ ಬಾನುಲಿಗಳಿಗೆ ಒತ್ತು ನೀಡಲು ಆಗ್ರಹ

Update: 2023-07-03 12:54 GMT

ಉಡುಪಿ : ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಸಮುದಾಯ ಬಾನುಲಿ ಗಳಿಗಾಗಿ ರಾಜ್ಯ ಸರಕಾರ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಿ ಸಮುದಾಯ ಬಾನುಲಿಗಳ ಕಾರ್ಯ ವನ್ನು ಉತ್ತೇಜಿಸ ಬೇಕು ಎಂದು ಕರ್ನಾಟಕ ಸಮುದಾಯ ಬಾನುಲಿ ಕೇಂದ್ರ ಗಳ ಸಂಘದ ಅಧ್ಯಕ್ಷೆ ಡಾ.ರಶ್ಮಿ ಅಮ್ಮೆಂಬಳ ಒತ್ತಾಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು(ಎನ್.ಜಿ.ಒ)ಗಳು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರ ಗಳಲ್ಲಿ ಸಮುದಾಯ ಬಾನುಲಿಗಳನ್ನು ಆರಂಭಿಸಿವೆ. ಇಡೀ ದೇಶದಲ್ಲಿ ೪೩೯ಕ್ಕೂ ಹೆಚ್ಚು ಸಮುದಾಯ ಬಾನುಲಿಗಳಿದ್ದರೆ ಕರ್ನಾಟಕದಲ್ಲಿ ಸುಮಾರು ೨೪ ಸಮುದಾಯ ಬಾನುಲಿಗಳು ಕಾರ್ಯನಿರ್ವಹಿಸುತ್ತಿವೆ.

ಸ್ವತಃ ಸುದ್ದಿ ಸಂಗ್ರಹಿಸಿ ಮಾಡಬಹುದಾದ ವಾರ್ತೆಗಳ ಪ್ರಸಾರವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳನ್ನು ಸಮುದಾಯ ಬಾನುಲಿಗಳು ಪ್ರಸಾರ ಮಾಡುತ್ತವೆ. ಅಂದರೆ ಸ್ಥಳೀಯರ ಸಹಭಾಗಿತ್ವದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಯಮಾವಳಿ ಅನುಸಾರ ಶಿಕ್ಷಣ, ಆರೋಗ್ಯ, ಕೃಷಿ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ಇವು ಪ್ರಸಾರ ಮಾಡುತ್ತಿವೆ. ಆದರೆ ಪ್ರಾದೇಶಿಕ ಮಟ್ಟದಲ್ಲಿ ಸಮುದಾಯದ ಅಭಿವೃದ್ಧಿ ಪರವಾಗಿರುವ ಸಮುದಾಯ ಬಾನುಲಿಯ ಕಾರ್ಯಗಳಿಗೆ ಸರಕಾರದ ನೆರವು ನಿರಂತರವಾಗಿ ಸಿಗುತ್ತಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಸಮುದಾಯ ಬಾನುಲಿಗಳನ್ನು ಬೆಳೆಸಬೇಕೆನ್ನುವುದು ಕೇಂದ್ರ ಸರಕಾರದ ಆಶಯ. ಅನೇಕ ಬಾರಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಪತ್ರ ಬರೆದು ಸ್ಥಳೀಯ ಸಮುದಾಯ ಬಾನುಲಿಗಳನ್ನು ಉತ್ತೇಜಿಸಲು ಆರ್ಥಿಕ ಬಲ ತುಂಬುವ ವಿಶೇಷ ಪ್ರಾಜೆಕ್‌ಗಳನ್ನು ನೀಡಬೇಕೆಂದು ಸೂಚಿಸಿದ್ದಿದೆ. ಆದರೆ ಕೇಂದ್ರ ಸರಕಾರದ ಈ ಮನವಿಗೆ ರಾಜ್ಯ ಸರಕಾರಗಳು ಇನ್ನೂ ಮಾನ್ಯ ಮಾಡದಿರುವುದು ವಿಷಾದದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದ್ದ ’ನಮ್ಮ ಬಾನುಲಿ’ ಯೋಜನೆಯನ್ನೂ ಇತ್ತೀಚಿನ ವರ್ಷಗಳಲ್ಲಿ ಸ್ಥಗಿತಗೊಳಿಸಲಾಗಿದ್ದು ಇದನ್ನು ಮರುಪರಿಶೀಲಿಸುವ ಅಗತ್ಯವಿದೆ. ವಾರ್ಷಿಕ ಮಾಧ್ಯಮ ಯೋಜನೆಯಲ್ಲಿ ಸಮುದಾಯ ಬಾನುಲಿಗಳನ್ನು ಸೇರಿಸುವ ಮೂಲಕ ಅವುಗಳ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಆದೇಶ ಬಂದು ಒಂದು ವರ್ಷ ಕಳೆದರೂ ರಾಜ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇತರ ಮಾಧ್ಯಮಗಳಿಗೆ ನೀಡುವ ಸರಕಾರಿ ಜಾಹೀರಾತುಗಳನ್ನೂ ನೀಡುತ್ತಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News