ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ. ಜಿಲ್ಲೆಯ 20 ಮಂದಿ ಸುರಕ್ಷಿತ
ಮಂಗಳೂರು, ಜು.9: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಅಮರನಾಥ ಯಾತ್ರೆ ಕೈಗೊಂಡವರು ಅರ್ಧದಲ್ಲಿ ಸಿಲುಕಿಕೊಂಡಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯಿಂದ ತೆರಳಿದ್ದ 20 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಮರನಾಥ ಯಾತ್ರೆ ಕೈಗೊಂಡಿರುವ ತಂಡವು ಪೆಹಲ್ಗಾಮ್‌ನಿಂದ 50 ಕಿಮೀ ದೂರದಲ್ಲಿರುವ ಮೀರ್ ಬಝಾರ್ ಸೇನಾ ಶಿಬಿರದಲ್ಲಿ ಉಳಿದು ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಮೂಡುಬಿದಿರೆ, ಬಂಟ್ವಾಳ, ಬಿಸಿ ರೋಡ್ ಮತ್ತು ಮಂಗಳೂರು ನಗರ ಪ್ರದೇಶಗಳ ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ತೆರಳಿದ್ದಾರೆ.
ಶಿಬಿರದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಈಗಾಗಲೇ ಅಮರನಾಥನ ದರ್ಶನ ಪಡೆದವರೂ ಇದ್ದಾರೆ. ಈ ಬಾರಿ ಪ್ರತಿಕೂಲ ಹವಾಮಾನವು ಯಾತ್ರಾರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ. ರಂಭಾನ್ ಎಂಬಲ್ಲಿ ಭೂಕುಸಿತ ಉಂಟಾಗಿರುವ ಕಾರಣದಿಂದಾಗಿ ಯಾತ್ರಾರ್ಥಿಗಳಿಗೆ ತಮ್ಮ ಯಾತ್ರೆ ಮುಂದುವರಿಸಲು ಅಡಚಣೆ ಉಂಟಾಗಿದೆ.
ಯಾತ್ರಾರ್ಥಿಗಳು ಈ ಮೊದಲು ನಿಗದಿಯಾದಂತೆ ರವಿವಾರ ಪೆಹಲ್ಗಾಮ್ ತಲುಪಬೇಕಿತ್ತು. ಆದರೆ ಇದೀಗ ಹವಾಮಾನ ವೈಪರೀತ್ಯ ಹಾಗೂ ಪ್ರತಿಕೂಲ ಹವಾಮಾನ ಕಾರಣದಿಂದಾಗಿ ಅನುಮತಿ ನಿರಾಕರಿಸಲಾಗಿದೆ.
ಮಿಲಿಟರಿ ಸಿಬ್ಬಂದಿ ಆಹಾರ ಮತ್ತು ಹೊದಿಕೆಗಳನ್ನು ತಂಡಕ್ಕೆ ಒದಗಿಸುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಯಾತ್ರಾರ್ಥಿ ಶೇಖರ್ ಅಡ್ಯಾರ್ ಪದವು ಮಾಹಿತಿ ನೀಡಿದ್ದಾರೆ.
ಅಡ್ಯಾರ್‌ನ 8, ನರಿಕೊಂಬು 5, ಸಜಿಪ 3, ಪುತ್ತೂರು 1, ಉಡುಪಿ 1, ಮೂಡುಬಿದಿರೆ 1, ಕರಾಯದ ಓರ್ವ ಯಾತ್ರಾರ್ಥಿ ಸಿಲುಕಿಕೊಂಡಿರುವ ಮಾಹಿತಿ ಲಭಿಸಿದೆ. ಕಳೆದ ವರ್ಷವೂ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ವೇಳೆ ಸಮಸ್ಯೆ ಎದುರಿಸಿದ್ದರು. ಹೀಗಿದ್ದರೂ ಸುರಕ್ಷಿತವಾಗಿ ವಾಪಸಾಗಿದ್ದರು.
ಯಾವುದೇ ಮಾಹಿತಿ ಇಲ್ಲ : ಡಿಸಿ ಮುಲ್ಲೈ ಮುಗಿಲನ್
ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲ. ಸಿಲುಕಿಕೊಂಡವರು ನಮ್ಮನ್ನು ಸಂಪರ್ಕಿಸಿಲ್ಲ. ಯಾರಾದರೂ ಅಪಾಯದಲ್ಲಿದ್ದರೆ ಅವರು ಅಥವಾ ಅವರ ಕುಟುಂಬದ ಸದಸ್ಯರು ನೆರವಿಗೆ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.