ಶಿಕ್ಷಣವನ್ನು ಉದ್ಯೋಗದ ದೃಷ್ಟಿಯಿಂದ ಪರಿಗಣಿಸಬೇಡಿ: ಬಿ.ಕೆ. ಹರಿಪ್ರಸಾದ್
ಮಂಗಳೂರು: ಶಿಕ್ಷಣವನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ಪರಿಗಣಿಸಬೇಡಿ. ಮಕ್ಕಳು ಸ್ವಾವಲಂಬಿಯಾಗಿ ಬದುಕಲು ಹೆತ್ತವರು, ಶಿಕ್ಷಕರು ಶ್ರಮಿಸ ಬೇಕು. ಶಿಕ್ಷಣದಿಂದ ವಂಚಿತವಾಗಿದ್ದ ಸಮುದಾಯವು ಇಂದು ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಲು ನಾರಾಯಣಗುರುಗಳು ಮಾಡಿದ ಕ್ರಾಂತಿಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟರು.
ನಾರಾಯಣ ಗುರು ಯುವ ವೇದಿಕೆಯ ವತಿಯಿಂದ ರವಿವಾರ ನಗರದ ಪುರಭವನದಲ್ಲಿ ನಡೆದ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ಉಜ್ವಲವಾದರೆ ದೇಶದ ಭವಿಷ್ಯವೂ ಉಜ್ವಲವಾಗಲಿದೆ. ಆದ್ದರಿಂದ ಮಕ್ಕಳು ಶಿಕ್ಷಣ ಪಡೆಯುವ ಮೂಲಕ ನಾರಾಯಣ ಗುರುಗಳ ಸಂದೇಶದಂತೆ ಸಂಘಟಿತ ಸಮಾಜವನ್ನು ಕಟ್ಟಬೇಕು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಮಾತನಾಡಿ, ಜಿಲ್ಲೆಯಲ್ಲಿ ಕೇವಲ ಶೇ.೧-೨ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯದವರು ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಆದರೆ ಶೇ.೩೫ರಷ್ಟು ಜನಸಂಖ್ಯೆ ಹೊಂದಿರುವ ಬಿಲ್ಲವ ಸಮುದಾಯವು ಯಾವುದೇ ಕಾಲೇಜುಗಳನ್ನು ಹೊಂದಿಲ್ಲದಿರುವುದು ಬೇಸರದ ವಿಚಾರ ಎಂದರು.
ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಮಾತನಾಡಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ತಮ್ಮ ಕಷ್ಟವನ್ನು ಮರೆ ಮಾಚಿ ಓದಿಸು ತ್ತಾರೆ. ಆದ್ದರಿಂದ ತಂದೆ-ತಾಯಿಗೆ ಗೌರವ ಕೊಡುವುದನ್ನು ಕಲಿಯಬೇಕು. ವಿದ್ಯಾವಂತರಾಗುವ ಜತೆಗೆ ವಿನಯವಂತರಾಗಿ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ರಾಣಿ ಅಬ್ಬಕ್ಕ ಅಕಾಡಮಿಯ ತರಬೇತಿ ಅಧಿಕಾರಿ ದಾಸಪ್ಪಪೂಜಾರಿ ನೆಕ್ಕಿಲಾರ್, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಸಾಮಾಜಿಕ ಕಾರ್ಯಕರ್ತೆ ಸುಮನಾ ರಾವ್, ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಬ್ರಿಜೇಶ್ ಅಂಚನ್, ಕಾರ್ಯದರ್ಶಿ ಸುಜಿನ್ ಅತ್ತಾವರ ಉಪಸ್ಥಿತರಿದ್ದರು.
ಎಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂಡುಬಿದಿರೆಯ ಅಳಿಯೂರಿನ ಸಮೀಕ್ಷಾಗೆ ಬ್ರಹ್ಮಶ್ರೀ ಬಂಗಾರದ ಪದಕ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿ ಹಿಮಾನಿ ಅವರನ್ನು ಸನ್ಮಾನಿಸಲಾಯಿತು. ಎಸೆಸ್ಸೆಲ್ಸಿಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಮತ್ತು ಪಿಯುಸಿಯಲ್ಲಿ ಶೇ.೯೭ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ವಾಮನ ಕೆ. ಮತ್ತು ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಭಗೀರಥ ಬಾಲಕ ಎಂದು ಹೆಸರು ಪಡೆದಿರುವ ಸೃಜನ್ ಪೂಜಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೇಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದೀಕ್ಷಿತ್ ಅಂಡಿಂಜೆ ಮತ್ತು ಸಚಿನ್ ಕಲಾಯಿ ಅವರಿಂದ ಹಾಡು ಮತ್ತು ನಾಟ್ಯಲಹರಿ ನೃತ್ಯ ತಂಡದಿಂದ ನೃತ್ಯ ಪ್ರದರ್ಶನಗೊಂಡಿತು.
ವೇದಿಕೆಯ ಸಲಹಾ ನಿರ್ದೇಶಕ ನೀಲಯ್ಯ ಎಂ.ಅಗರಿ ಸ್ವಾಗತಿಸಿದರು. ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.