ಡಾ.ಗುರುರಾಜ್, ಡಾ.ದೀಪ್ತಾಗೆ ಡಾ.ಟಿಎಂಎ ಪೈ ದತ್ತಿ ನಿಧಿ
ಉಡುಪಿ, ಜು.15: ಮಾಹೆ ಆಡಳಿತಕ್ಕೆ ಒಳಪಟ್ಟ ಬೆಂಗಳೂರಿನ ಸೃಷ್ಟಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯ ಡಾ. ಗುರುರಾಜ್ ಕೆ.ವಿ. ಹಾಗೂ ಡಾ.ದೀಪ್ತ ಸತೀಶ್‌ರಿಗೆ ಪ್ರತಿಷ್ಠಿತ ಡಾ.ಟಿಎಂಎ ಪೈ ದತ್ತಿ ನಿಧಿಯನ್ನು ಘೋಷಿಸಲಾಗಿದೆ. ಇದು ಅವರ ಸಂಶೋಧನಾ ಕಾರ್ಯಕ್ಕೆ ಪ್ರತಿ ವರ್ಷ ತಲಾ 10 ಲಕ್ಷ ರೂ.ಗಳ ನಿಧಿಯನ್ನು ಹೊಂದಿರುತ್ತದೆ.
ಪಶ್ಚಿಮ ಘಟ್ಟಗಳಲ್ಲಿ ಕಪ್ಪೆಗಳ ಕುರಿತಂತೆ ಸಂಶೋಧನೆ ನಡೆಸುತ್ತಿರುವ ಅಕಾಡೆಮಿಕ್ ಡೀನ್ ಡಾ.ಗುರುರಾಜ್ ಕೆ.ವಿ. ಅವರು ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದ ಕಪ್ಪೆ ಹಾಗೂ ನೆಲಗಪ್ಪೆಗಳ ಶ್ರವಣಗುಣದ ಮೇಲಾಗುವ ಪರಿಣಾಮಗಳ ಕುರಿತು ಪ್ರಯೋಗ ನಡೆಸಲು ಅತ್ಯಾಧುನಿಕ ಪ್ರಯೋಗಶಾಲೆ ಯೊಂದನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಇದಕ್ಕಾಗಿ ಅವರು ಡೇಟಾ ಸಂಗ್ರಹದಲ್ಲಿ ತೊಡಗಿದ್ದಾರೆ.
ಸಂಸ್ಥೆಯಲ್ಲಿ ರಿಸರ್ಚ್ ಡೀನ್ ಆಗಿರುವ ದೀಪ್ತ ಸತೀಶ್ ಅವರು ಪಶ್ಚಿಮ ಘಟ್ಟ ಹಾಗೂ ಅರೆಬಿಯನ್ ಸಮುದ್ರದ ನಡುವೆ ಕುಂದಾಪುರದ ಪಂಚ ಗಂಗಾವಳಿ ನದಿ ಪರಿಸರದಲ್ಲಿ ಅಭಿವೃದ್ಧಿಯಿಂದ ಪರಿಸರದ ಮೇಲಾಗುವ ಒತ್ತಡ, ಸಮಕಾಲೀನ ಪರಿಸರ ವೈರುಧ್ಯ, ಹವಾಮಾನ ಬದಲಾವಣೆಗಳ ಕುರಿತು ಹಾಗೂ ಅವುಗಳಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಸಂಶೋಧನೆ ನಡೆಸಲಿದ್ದಾರೆ.