ಡ್ರಗ್ಸ್ ಮುಕ್ತ ಮಂಗಳೂರಿಗಾಗಿ ವಿಶೇಷ ಅಭಿಯಾನ: ಡಿಸಿಪಿ ದಿನೇಶ್ ಕುಮಾರ್

Update: 2023-06-24 11:24 GMT

ಮಂಗಳೂರು, ಜೂ.24: ನಗರವನ್ನು ಆ. 15ರೊಳಗೆ ಡ್ರಗ್ಸ್ ಮುಕ್ತಗೊಳಿಸುವ ಪ್ರಯತ್ನವಾಗಿ ಪೊಲೀಸರು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಹೈಸ್ಕೂಲ್ ಮೇಲ್ಪಟ್ಟ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಡ್ರಗ್ಸ್ ಪೂರೈಕೆಯ ದಾರಿಗಳನ್ನು ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರೇಟ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಹೇಳಿದ್ದಾರೆ.

ಉರ್ವ ಪೊಲೀಸ್ ಠಾಣೆಯಲ್ಲಿ ಶನಿವಾರ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಭಿಯಾನದಲ್ಲಿ ವೈದ್ಯರು ಕೈಜೋಡಿಸಲಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಡ್ರಗ್ಸ್ ಬಗ್ಗೆ ಸಾರ್ವಜನಿಕರು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ಡ್ರಗ್ಸ್ ಹಾವಳಿ ವ್ಯಾಪಿಸುವ ಅಪಾಯವಿದೆ. ಮಾಹಿತಿ ನೀಡುವವರ ವಿವರ ಗೌಪ್ಯವಾಗಿರಿಸಲಿದ್ದು, ಅದರ ಪೂರ್ಣ ಹೊಣೆಯನ್ನು ತಾನು ನಿಭಾಯಿಸುವುದಾಗಿ ಡಿಸಿಪಿ ದಿನೇಶ್ ಕುಮಾರ್ ಹೇಳಿದರು.

ಸಾರ್ವಜನಿಕರು ಮನೆ ಅಥವಾ ಫ್ಲ್ಯಾಟ್‌ನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆದಾರರ ಪೂರ್ವಾಪರವನ್ನು ವಿಚಾರಿಸಬೇಕು, ಅನಂತರವೂ ಅವರ ಮೇಲೆ ನಿಗಾ ಇಟ್ಟುಕೊಳ್ಳಬೇಕು ಎಂದು ಅವರು ಈ ಸಂದರ್ಭ ಸೂಚನೆ ನೀಡಿದರು.

ಇನ್ಸ್‌ಪೆಕ್ಟರ್ ಭಾರತಿ ಅವರು ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕ ಅಪರಿಚಿತರು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಉರ್ವ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ಮಾದಕ ದ್ರವ್ಯ ವ್ಯಸನಿಗಳು ಇರುವುದು ಪತ್ತೆಯಾಗಿತ್ತು. ಆದರೆ ಬಾಡಿಗೆ ಮನೆಯ ಮಾಲಕರಿಗೆ ಅವರ ಬಾಡಿಗೆ ಮನೆಯಲ್ಲಿ ಎಷ್ಟು ಮಂದಿ ಇದ್ದರು ಎಂಬ ಮಾಹಿತಿಯೂ ಇರಲಿಲ್ಲ ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ರಕ್ಷಣೆ, ಅನುಕೂಲ

ಹಿರಿಯ ನಾಗರಿಕರು ಮಾತ್ರ ವಾಸಿಸುವ, ಒಬ್ಬಂಟಿ ವಾಸವಿರುವ ಮನೆಗಳ ಸಮಗ್ರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಹಿರಿಯ ನಾಗರಿಕರೋರ್ವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಅವರು, ಹಿಂದಿನಿಂದಲೂ ಇಂತಹ ಮಾಹಿತಿಯನ್ನು ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಅಲ್ಲದೆ ತಿಂಗಳಿಗೊಮ್ಮೆ ಹಿರಿಯ ನಾಗರಿಕರ ಸಭೆ ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರ ಬೇಡಿಕೆ, ಆಗ್ರಹ

ಉರ್ವಸ್ಟೋರ್-ಅಶೋಕನಗರ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಕ್ರಮ ವಹಿಸಿ, ಸಿಟಿ ಬಸ್‌ಗಳ ನಿರ್ಲಕ್ಷ್ಯದ ಚಾಲನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಹೈ ಬೀಮ್‌ನಲ್ಲೇ ವಾಹನ ಚಲಾಯಿಸುವವರ ವಿರುದ್ಧ ಕ್ರಮವಾಗಲಿ ಎಂಬ ಹಲವಾರು ಬೇಡಿಕೆ, ಆಗ್ರಹಗಳು ಸಾರ್ವಜನಿಕರಿಂದ ವ್ಯಕ್ತವಾಯಿತು.

ಸಾರ್ವಜನಿಕರಿಗೆ ಸೂಚನೆ

* ಸಂಚಾರ ನಿಯಮ ಉಲ್ಲಂಘನೆಯ ಫೋಟೊ, ಮಾಹಿತಿಯನ್ನು ಸಾರ್ವಜನಿಕರು 9480802305 ಅಥವಾ 9480802321ಗೆ ಕಳುಹಿಸಬಹುದು.

*ಪುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಕ್ರಮ.

*ಎಫ್‌ಐಆರ್ ಅಥವಾ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂಜರಿದರೆ ಮೇಲಾಧಿಕಾರಿಗಳಿಗೆ ದೂರು ನೀಡಿ.

* ಡ್ರಗ್ಸ್ ಸೇವನೆ ಬಗ್ಗೆ ಪೋಷಕರಿಗೆ ಮಾಹಿತಿ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ದೂರು ದಾಖಲಿಸದೆ ಚಿಕಿತ್ಸೆ ಕೊಡಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News