ಟೆಲಿಸ್ಕೋಪ್ ನೆರವಿಲ್ಲದೇ ಗೋಚರಿಸುತ್ತಿದೆ ಭೂಮಿಗಾತ್ರದ ‘ಸನ್‌ಸ್ಪಾಟ್’

Update: 2023-07-13 13:31 GMT

ಉಡುಪಿ, ಜು.13: ಸೂರ್ಯನ ಮೇಲ್ಮೈಯಲ್ಲಿ ಒಂದು ಸೌರಕಲೆಯನ್ನು ಗುರುತಿಸಲಾಗಿದೆ. ಇದನ್ನು ಸೌರಕಲೆ 3363 ಎಂದು ಹೆಸರಿಸಿದ್ದಾರೆ. ಅದು ಪ್ರಸ್ತುತ ಯಾವುದೇ ದೂರದರ್ಶಕಗಳ ಸಹಾಯವಿಲ್ಲದೆ ಬರಿಗಣ್ಣಿಗೆ (ಕಡ್ಡಾಯ ವಾಗಿ ಫಿಲ್ಟರ್ ಬಳಸಿ) ಗೋಚರಿಸುತ್ತಿದೆ ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಸೌರಕಲೆ ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ. ಅಲ್ಲಿ ತಾಪಮಾನವು ಅದರ ಸುತ್ತಮುತ್ತಲಿನ ಪ್ರದೇಶ ಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ. ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿವೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500ಕೆ ಅಷ್ಟು ತಾಪಮಾನದ ವ್ಯತ್ಯಾಸವಿದೆ. ಅಂದರೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಸೌರಕಲೆಗಿಂತ ಹೆಚ್ಚಿನ ಬೆಳಕನ್ನು ನೀಡುತ್ತದೆ. ಹೀಗಾಗಿ ಅದು ಕಪ್ಪಾಗಿ ಕಾಣುತ್ತದೆ.

ಕಳೆದ ಕೆಲವು ದಿನಗಳಲ್ಲಿ ಸೌರಕಲೆ-3363ನ್ನು ಗಮನಿಸಲಾಗಿದ್ದು, ಅದರ ಗಾತ್ರ ಹೆಚ್ಚಾಗುತ್ತಿದೆ. ಗಾತ್ರದಲ್ಲಿನ ಈ ಹೆಚ್ಚಳವು ಯಾವುದೇ ದೂರದರ್ಶಕ ಗಳು ಅಥವಾ ಬೈನಾಕ್ಯುಲರ್‌ಗಳಿಲ್ಲದೆ ಸೌರಶೋಧಕದ ಸಹಾಯದಿಂದ ಬರಿಗಣ್ಣಿಗೆ ಸೌರಕಲೆ ಗೋಚರಿಸುವಂತೆ ಮಾಡಿದೆ. ಸಾಮಾನ್ಯವಾಗಿ, ಸೌರಕಲೆ ಗಳು ಸೌರ ಶೋಧಕವನ್ನು ಹೊಂದಿದ ದೂರದರ್ಶಕದಲ್ಲಿ ಮಾತ್ರ ಗೋಚರಿಸುತ್ತವೆ. ಹಾಗಾಗಿ ಈ ಸೌರಕಲೆ-3363ರ ಗಾತ್ರವು ಪ್ರಸ್ತುತ ಭೂಮಿಗಿಂತ ದೊಡ್ಡದಾಗಿದೆ ಎಂಬುದನ್ನು ಸೂಚಿಸುತ್ತದೆ.

ವಿಶಿಷ್ಟವಾಗಿ ಸೌರಕಲೆಗಳು ಗಾತ್ರದಲ್ಲಿ 16 ಕಿ.ಮೀ.ನಿಂದ 1,60,000 ಕಿ.ಮೀ.ವರೆಗೆ ಬದಲಾಗಬಹುದು. ಭೂಮಿಯ ವ್ಯಾಸವು 12742 ಕಿ.ಮೀ. ಆದ ಕಾರಣ, ಸೌರಕಲೆಯು ಭೂಮಿಗಿಂತ ದೊಡ್ಡದಾಗಿರುವುದು ಸಹಜ. ಆದಾಗ್ಯೂ, ಸೌರಕಲೆಗಳ ಗಾತ್ರ ಮತ್ತು ನೋಟವು ಏಕರೂಪವಾಗಿರುವುದಿಲ್ಲ. ಸೌರಕಲೆಗಳ ನೋಟವು ಸೌರಚಕ್ರ ಎಂಬುದರ ಮೇಲೆ ಅವಲಂಬಿತ ವಾಗಿರುತ್ತದೆ.

ಇದು 11 ವರ್ಷಗಳ ಅವಧಿಯಾಗಿದ್ದು, ಮೊದಲು ಸೂರ್ಯನ ಮೇಲ್ಮೈಯಲ್ಲಿನ ಚಟುವಟಿಕೆಯು ಹೆಚ್ಚಾಗುತ್ತದೆ. ನಂತರ ಕಡಿಮೆಯಾಗುತ್ತದೆ. ಹೀಗೆ ಇದರ ಪುನರಾವರ್ತನೆಯಾಗುತ್ತದೆ. ಪ್ರಸ್ತುತ 2019ರಲ್ಲಿ ಈ ಸೌರಚಕ್ರ ಪ್ರಾರಂಭವಾಗಿದ್ದು, 2025ರಲ್ಲಿ ಇದು ಗರಿಷ್ಠ ಚಟುವಟಿಕೆಯನ್ನು ತೋರಿ ಸುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ನಾವು ಭವಿಷ್ಯದಲ್ಲಿಯೂ ಸಹ ಇಂತಹ ಹೆಚ್ಚಿನ ಸೂರ್ಯನ ಕಲೆಗಳನ್ನು ವೀಕ್ಷಿಸುತ್ತೇವೆ.

ಆದರೆ ಇದು ಯಾವಾಗಲೂ ಭೂಮಿಗೆ ಎದುರಾಗಿರುವ ಸೂರ್ಯನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ವಿಜ್ಞಾನಿಗಳು ಯಾಕಾಗಿ ಈ ಚಕ್ರವು ಕೇವಲ 11 ವಷರ್ಕ್ಕೆ ಮುಗಿಯುತ್ತದೆ ಎಂಬಂತೆ ಅದರ ಬಗೆಗಿನ ಹಲವಾರು ರಹಸ್ಯಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಸೌರಕಲೆಯು ಸೂರ್ಯನ ಸಂಕೀರ್ಣ ಕಾಂತೀಯ ಕ್ಷೇತ್ರಗಳ ಪರಿಣಾಮವಾಗಿದೆ. ಸೌರಕಲೆ-3363 ಸ್ಫೋಟಗೊಳ್ಳುವುದಿಲ್ಲ ಮತ್ತು ಭೂಮಿಗೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡುವುದಿಲ್ಲ ಎಂಬುದು ನಮಗೆ ತಿಳಿದಿರುವ ಏಕೈಕ ವಿಷಯವಾಗಿದೆ.

ಒಂದು ಸೌರಕಲೆಯನ್ನು ಯಾವ ಸ್ಥಳದಿಂದಾದರೂ ಕೆಲವು ದಿನ ಅಥವಾ ಗಂಟೆಗಳವರೆಗೆ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಬಹುದು. ಸೂರ್ಯನು ಚಲಿಸುವ ಅನುಗುಣಕ್ಕೆ ತಕ್ಕಂತೆ ಸೂರ್ಯನ ಮೇಲ್ಮೈಯಲ್ಲಿರುವ ಸ್ಥಿರವಾದ ಹಾಗೂ ದೊಡ್ಡದಾದ ಸೌರಕಲೆಗಳು ಕೆಲ ದಿನಗಳವರೆಗೆ ಗೋಚರಿಸುತ್ತವೆ. ಹಾಗೂ ಇನ್ನೂ ಕೆಲವು ಕೆಲ ಗಂಟೆಗಳ ಒಳಗೆ ಮರೆಯಾಗುತ್ತದೆ. 3363 ಎಂಬ ಸೌರಕಲೆಯು ಈ ವರ್ಷದ ಜುಲೈ 6ನೇ ತಾರೀಕಿನಿಂದ ಗೋಚರಿಸುತ್ತಿದ್ದು, ಈ ವಾರದ ಅಂತ್ಯದವರೆಗೆ ಗೋಚರಿಸುವ ಸಾಧ್ಯತೆ ಇದೆ. ಇದಾದ ನಂತರ ನಮ್ಮ ನೋಟದಿಂದ ದೂರ ಹೋಗುವ ಸಾಧ್ಯತೆ ಇದ್ದು, ಮತ್ತೆ ಗೋಚರಿಸಲು ಸಾಧ್ಯವಿಲ್ಲ.

ಸೂರ್ಯನ ಮೇಲ್ಮೈಯಲ್ಲಿರುವ ಒಂದು ಕಲೆಯು ಆಕಾರದಲ್ಲಿ ನಮ್ಮ ಭೂಮಿಯ ಮೇಲ್ಮೈಗಿಂತ ದೊಡ್ಡದಾಗಿದ್ದು, ಪ್ರಕೃತಿಯಲ್ಲಿ ಗೋಚರಿಸುವ ಇಂತಹ ಅದ್ಭುತ ಕ್ರಿಯೆಯನ್ನು ಗಮನಿಸುವುದು ಅತ್ಯಂತ ಮುಖ್ಯವಾಗಿದೆ. ಇದರ ಜೊತೆಗೆ ಸೂರ್ಯ ಎಷ್ಟು ದೊಡ್ಡದಾಗಿದೆ ಎಂಬ ಸ್ಪಷ್ಟ ಚಿತ್ರಣವನ್ನು ಸಹ ಇದು ನಮಗೆ ನೀಡುತ್ತದೆ ಎಂದು ಸಂಘದ ಸಂಯೋಜಕ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್ ತಿಳಿಸಿದ್ದಾರೆ.

ಸೌರಕಲೆ 3363ನ್ನು ಹೀಗೆ ವೀಕ್ಷಿಸಬೇಕು.....

ಸೂರ್ಯನನ್ನು ವೀಕ್ಷಿಸುವ ವೇಳೆಯಲ್ಲಿ ನಾವು ಫಿಲ್ಟರ್‌ನ ಬಳಕೆಯಂತಹ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂರ್ಯನನ್ನು ನೇರವಾಗಿ ನೋಡುವುದಾಗಲಿ, ದಿನನಿತ್ಯದ ಚಟುವಟಿಕೆಯಲ್ಲಿ ಬಳಸುವ ಎಕ್ಸರೇ ಹಾಳೆ, ಕನ್ನಡಕಗಳನ್ನು ಬಳಸಬಾರದು. ಸೂರ್ಯನನ್ನು ಯಾವಾಗಲೂ ಪ್ರಮಾಣೀಕರಿಸಿದ ಸೋಲಾರ್ ಫಿಲ್ಟರ್‌ನ ಮೂಲಕವೇ ನೋಡಬೇಕು. ಈ ವಸ್ತುವಿನ ಹೊರತಾಗಿ ಬೇರೆ ವಸ್ತುಗಳ ಮೂಲಕ ಸೂರ್ಯನನ್ನು ನೋಡಿ ದರೆ ಕಣ್ಣಿನ ದೃಷ್ಟಿಗೆ ಅಪಾಯವಾಗುತ್ತದೆ ಹೀಗಾಗಿ ಗರಿಷ್ಠ ಜಾಗೃತೆಯನ್ನು ವಹಿಸಬೇಕಾಗುತ್ತದೆ.

ಈ ಸೌರಕಲೆಯ ಬೆಳವಣಿಗೆಯ ಹಂತಗಳನ್ನು ನಾಸಾ ಲೈವ್‌ನಲ್ಲಿ ಸೂರ್ಯನ ದೃಶ್ಯವನ್ನು ತೋರಿಸಿದಂತೆ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ. ಆಸಕ್ತಿಯುಳ್ಳವರು ಇದನ್ನು ಅನುಸರಿಸಬಹುದು.

ಮಳೆಗಾಲದ ಈ ಸಮಯದಲ್ಲಿ ಮೋಡದಲ್ಲಿ ಮರೆಯಾದ ಸೂರ್ಯನನ್ನು ನೋಡುವ ಮೂಲಕ ಆತನಲ್ಲಿರುವ ದೊಡ್ಡದಾದ ಸೌರಕಲೆಯನ್ನು ಸ್ಪಷ್ಟವಾಗಿ ಪತ್ತೆಹಚ್ಚಿ ನೋಡಿ ಗುರುತಿಸಬೇಕೆಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕ ಅತುಲ್ ಭಟ್ ಆಸಕ್ತರಿಗೆ ಸಲಹೆ ನೀಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News