ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಶೈಕ್ಷಣಿಕ ಸಮ್ಮೇಳನ
ಮಂಗಳೂರು, ಜು.2: ಮಂಗಳೂರು ನಗರ ಪ್ರೌಢಶಾಲಾ ಮುಖ್ಯೋಪಾಧ್ಯಾಯರ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ವಾರ್ಷಿಕ ಶೈಕ್ಷಣಿಕ ಸಮ್ಮೇಳನವು ಶನಿವಾರ ನಗರದ ಕೋಡಿಯಾಲ್ ಬೈಲ್‌ನಲ್ಲಿರುವ ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಮ್ಯುನಿಕೇಶನ್ ಸೆಂಟರ್, ಮಂಗಳೂರು ಧರ್ಮಪ್ರಾಂತದ ನಿರ್ದೇಶಕ ವಂ.ಫಾ.ಅನಿಲ್ ಫೆರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಸಹ ಕಾರ್ಯದರ್ಶಿ ಡಾ. ಮನೆಲ್ ಅರ್ಜುನ್ ನಾಯಕ್ ಶುಭ ಹಾರೈಸಿದರು. 2022-23 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಮಿಲಾಗ್ರಿಸ್ ಪ್ರೌಢಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೊ ತನ್ನ ಟ್ರಸ್ಟ್ ಮೂಲಕ ವಿದ್ಯಾರ್ಥಿ ವೇತನ ವಿತರಿಸಿದರು.
ಭಗವತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಕನ್ನಡ ಮಾಧ್ಯಮದಲ್ಲಿ ತೃತೀಯ ಸ್ಥಾನವನ್ನು ಗಳಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ತನ್ನ ಮೃತ ಮಗಳ ನೆನಪಿನಲ್ಲಿ ವಿದ್ಯಾರ್ಥಿ ವೇತನ ವಿತರಿಸಿದರು.
2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸದಸ್ಯ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. 2022-23ನೇ ಸಾಲಿನಲ್ಲಿ ನಿವೃತ್ತರಾದ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಜಯವಂತಿ ಸೋನ್ಸ್ ಸ್ವಾಗತಿಸಿದರು. ಕಾರ್ಯದರ್ಶಿ ಮೆಟ್ಟಿಲ್ದ ಡಿಕೋಸ್ಟ ವಂದಿಸಿದರು. ಶಾಂತಿ ಲೋಬೋ ಹಾಗೂ ಅನಿತಾ ಕಾರ್ಯಕ್ರಮ ನಿರೂಪಿಸಿದರು.