ಕೆಥೋಲಿಕ್ ಸಭಾದಿಂದ ಪರಿಸರ ಜಾಗೃತಿಗೆ ಸಾಮೂಹಿಕ ವನಮಹೋತ್ಸವ

Update: 2023-07-10 18:36 GMT

ಉಡುಪಿ, ಜು.10: ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿ ಗಿಡಗಳನ್ನು ನೆಡುವ ಜೊತೆಗೆ ಅವುಗಳ ಪೋಷಣೆ ಮಾಡಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ್‌ನ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಹೇಳಿದ್ದಾರೆ.

ರವಿವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಉಡುಪಿ ವಲಯ ಹಾಗೂ ಘಟಕ ಇವರ ವತಿಯಿಂದ ಉಡುಪಿ ಧರ್ಮಪ್ರಾಂತದ 51 ಘಟಕಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಶೋಕಮಾತಾ ಚರ್ಚ್ ವಠಾರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಪರಿಸರದಿಂದ ಮಾತ್ರ ಪ್ರಪಂಚ ಸುರಕ್ಷಿತವಾಗಿರಲು ಸಾಧ್ಯ. ಸಮಯಕ್ಕೆ ಸರಿಯಾಗಿ ಮಳೆ-ಬೆಳೆಯಾಗಿ, ಆರೋಗ್ಯ ಚೆನ್ನಾಗಿರಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು. ಹಸಿರೀಕರಣವಾಗಿರಬೇಕು. ಪ್ರತಿಯೊಬ್ಬ ನಾಗರಿಕರೂ ಕೂಡ ಪರಿಸರ ಪ್ರೇಮಿಗಳಾಗಿ ಗಿಡ ಮರವನ್ನು ಕಾಪಾಡಿ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟು ಶ್ರಮಿಸುವ ಪಣತೊಡಬೇಕು ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಸೂಚನೆಯಂತೆ ಉಡುಪಿ ಜಿಲ್ಲೆಯ 51 ಘಟಕಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಣೆ ನಡೆದಿದ್ದು ಚರ್ಚುಗಳಲ್ಲಿ ಸಾಮೂಹಿಕವಾಗಿ ಸೇರಿ ಆಚರಣೆ ಮಾಡುವ ಬದಲು ಪ್ರತಿಯೊಬ್ಬರು ಗಿಡಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಸೇರಿ ನೆಟ್ಟು ಅದನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದೆ.

ಹತ್ತು ಅಥವಾ ಅದಕ್ಕಿಂತ ಹೆಚ್ಚು ಗಿಡಗಳನ್ನು ಈ ವರ್ಷ ನೆಟ್ಟು ಪೋಷಣೆ ಮಾಡಿದ ಕುಟುಂಬಗಳನ್ನು ನೊಂದಾಯಿಸಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಘಟಕ ಅಥವಾ ವಲಯದ ಪದಾಧಿಕಾರಿ ಗಿಡದ ಪೋಷಣೆಯ ವರದಿಯನ್ನು ಕೇಂದ್ರಿಯ ಸಮಿತಿಗೆ ಸಲ್ಲಿಸಲಿದ್ದು ಪ್ರಾಮಾಣಿಕವಾಗಿ ಗಿಡದ ಪೋಷಣೆ ಮಾಡಿದವರಿಗೆ ಬಹುಮಾನವನ್ನು ಕೇಂದ್ರಿಯ ಸಮಿತಿ ನೀಡಲಿದೆ. ಅದರಂತೆ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ರವಿವಾರ ಈ ವನಮಹೋತ್ಸವ ಆಚರಣೆ ನಡೆದಿದ್ದು 3,327 ಗಿಡಗಳನ್ನು ನೆಡಲಾಗಿದೆ.

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಾಜಿ ಅಧ್ಯಕ್ಷ ಅಲ್ಪೋನ್ಸ್ ಡಿಕೋಸ್ತಾ, ಆಲ್ವಿನ್ ಕ್ವಾಡ್ರಸ್, ವಲೇರಿಯನ್ ಫೆರ್ನಾಂಡಿಸ್, ರೋಬರ್ಟ್ ಮಿನೇಜಸ್, ನಿಯೋಜಿತ ಅಧ್ಯಕ್ಷ ರೊನಾಲ್ಡ್ ಡಿ’ಆಲ್ಮೇಡಾ, ಸಹಕೋಶಾಧಿಕಾರಿ ಲೆಸ್ಲಿ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸದಸ್ಯರಾದ ಲೊಯ್ಸೆಟ್ ಕರ್ನೇಲಿಯೊ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News