ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಪರಿಸರ ಸಾರ್ವಜನಿಕ ಸಭೆ

Update: 2023-07-07 12:16 GMT

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ವು ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಕಾರ್ಗೊ ಬರ್ತ್ ನಂ. 17ಕ್ಕೆ ಸಂಬಂಧಿಸಿ ಪರಿಸಾರಸಕ್ತರಿಂದ ಹಲವು ರೀತಿಯ ಅನುಮಾಗಳು ವ್ಯಕ್ತವಾಗಿರುವಂತೆಯೇ ಬಂದರು ಬಳಕೆದಾರರಿಂದ ಯೋಜನೆಗೆ ಬೆಂಬಲ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಪರಿಸಾರಕ್ತರು ಹಲವು ಪ್ರಶ್ನೆಗಳು, ಅನುಮಾನಗಳನ್ನು ಸಭೆಯ ಮುಂದಿಟ್ಟರು.

ಸಭೆಯಲ್ಲಿ ವ್ಯಕ್ತವಾದ ಸಲಹೆ, ಆಕ್ಷೇಪಗಳನ್ನು ಲಿಖಿತ ರೂಪದಲ್ಲಿಯೂ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದ ಜಿಲ್ಲಾಧಿಕಾರಿ, ಈ ಕುರಿತಂತೆ ವಿಸ್ತೃತ ರೂಪದ ವರದಿಯನ್ನು ಸರಕಾರದ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವುದಾಗಿ ಹೇಳಿದರು.

ಎನ್‌ಇಸಿಎಫ್ ಸಂಘಟನೆಯ ಶಶಿಧರ್ ಶೆಟ್ಟಿ ಸಾರ್ವಜನಿಕರಿಗೆ ಸಭೆಯ ಪೂರ್ವ ಮಾಹಿತಿಯನ್ನು ಕನಿಷ್ಠ ಒಂದು ವಾರದ ಮುಂಚಿತವಾಗಿ ತಿಳಿಸುವಲ್ಲಿ ಪರಿಸರ ಇಲಾಖೆ ವಿಫಲವಾಗಿದೆ. ಕಬ್ಬಿಣದ ಅದಿರು ಸಾಗಾಟದಿಂದ ಈಗಾಗಲೇ ನಗರದಲ್ಲಿ ಸಾಕಷ್ಟು ಪರಿಸರಕ್ಕೆ ಹಾನಿಯಾಗಿದೆ. ಹೊಸ ಬರ್ತ್‌ನಲ್ಲಿ ಕಬ್ಬಿಣದ ಅದಿರನ್ನು ಯಾವ ರೀತಿ ನಿರ್ವಹಣೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿಸಲಾಗಿಲ್ಲ ಎಂದು ಆಕ್ಷೇಪಿಸಿದರು.

ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಮಾತನಾಡಿ, ಎನ್‌ಎಂಪಿಟಿ ಅದೆಷ್ಟು ಸುರಕ್ಷಿತ ಹಾಗೂ ಹಸಿರು ವಲಯದಿಂದ ಕೂಡಿದೆ ಎಂಬುದನ್ನು ನೋಡಲು ಸಾರ್ವಜನಿಕರಿಗೂ ಅವಕಾಶ ಸಿಗಬೇಕು. ವನಮಹೋತ್ಸವದ ಸಂದರ್ಭ ವರ್ಷಕ್ಕೆ ಕನಿಷ್ಠ ೧೦೦೦೦ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಎನ್‌ಎಂಪಿಟಿಯಿಂದ ಆಗಬೇಕು ಎಂದರು.

ಮಾಲಿನ್ಯ ಆಗದ ರೀತಿಯಲ್ಲಿ ಎನ್‌ಎಂಪಿಎ ಅಭಿವೃದ್ಧಿ ಆಗಬೇಕು ಎಂದು ಮೊಗವೀರ ಮಹಾಜನ ಸಂಘದ ಭರತ್ ಕುಮಾರ್ ಅಭಿಪ್ರಾಯಿಸಿದರೆ, ಸದ್ಯ ಇರುವ ಬರ್ತ್‌ಗಳಲ್ಲಿ ದೊಡ್ಡ ಸರಕು ಹಡಗುಗಳ ಸರಕು ನಿರ್ವಹಣೆ ಕಷ್ಟ ಸಾಧ್ಯವಾಗಿರುವುದರಿಂದ ವಿಶಾಲವಾದ ಹೊಸ ಬರ್ತ್ ಕೆಐಸಿಒಎಲ್‌ನಿಂದ ಪರಿಸರಕ್ಕೆ ಹಾನಿಯಾಗದಂತೆ ಯಾಂತ್ರೀಕೃತವಾಗಿ ಕಬ್ಬಿಣದ ಅದಿರು ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಕೆಐಒಸಿಎಲ್‌ನ ಪ್ರತಿನಿಧಿ ಪವನ್‌ರಾಜ್ ಹೇಳಿದರು.

ನೂತನ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗವನ್ನು ಖಾತರಿಪಡಿಸಬೇಕೆಂದು ನವೀನ್ ಕುಮಾರ್ ಆಗ್ರಹಿಸಿದರೆ, ಮತ್ಯ ಸಂಪತ್ತು, ಪರಿಸರ ಹಾಗೂ ಸುರಕ್ಷತೆಗೆ ಆದ್ಯತೆಯೊಂದಿಗೆ ಬಂದರು ಉನ್ನತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಆಗಬೇಕು ಎಂದರು.

ಮಾಜಿ ಸಚಿವ ಹಾಗೂ ಬಂದರು ಬಳಕೆದಾರರೂ ಆಗಿರುವ ನಾಗರಾಜ ಶೆಟ್ಟಿಯವರು, ಮೀನುಗಾರರಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬಂದರು ಅಭಿವೃದ್ಧಿಯಾಗುವುದು ಅತೀ ಅಗತ್ಯವಾಗಿದೆ ಎಂದರು.

ಪ್ರಸ್ತುತ ಎನ್‌ಎಂಪಿಎಯಲ್ಲಿ ೭೪ ಮಿಲಿಯ ಟನ್ ಸರಕು ನಿರ್ವಹಣೆಯ ಸಾಮರ್ಥವಿದ್ದರೂ ಆಗುತ್ತಿರುವ ೪೦ ಮಿಲಿಯ ಟನ್. ಹಾಗಿದ್ದರೆ ಹೊಸ ಬರ್ತ್‌ನ ಅಗತ್ಯವೇನು? ಹೂಳೆತ್ತುವ ಮೂಲಕ ಇರುವ ಬರ್ತ್‌ಗಳನ್ನೇ ಉಪಯೋಗಿಸಬಹುದಲ್ಲವೇ? ಎಂದು ಅನಿಲ್ ಶಾಸ್ತ್ರಿಯವರು ಪ್ರಶ್ನಿಸಿದರು.

ಈ ಪ್ರಶ್ನೆಗೆ ಎನ್‌ಎಂಪಿಎ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರಸ್ತುತ ಇರುವ ಬರ್ತ್‌ಗಳಲ್ಲಿ ಗರಿಷ್ಠ ೩೦೦೦೦ ಟನ್‌ಗಳನ್ನು ಹೊತ್ತುಬರುವ ಹಡಗು ಗಳನ್ನು ಮಾತ್ರವೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಆದರೆ ದೊಡ್ಡ ಹಡಗುಗಳು ೭೦ ಸಾವಿರದಿಂದ ೧ ಲಕ್ಷ ಟನ್ ಸರಕು ತರುತ್ತವೆ. ಅವುಗಳನ್ನು ಇಳಿಸಲು ಸಾಧ್ಯವಾದ ಬರ್ತ್ ಇಲ್ಲದೆ ಇರುವುದರಿಂದ ಅವುಗಳು ಬೇರೆ ಬಂದರಿಗೆ ಸಾಗಿಸಲ್ಪಡುತ್ತವೆ. ಇದರಿಂದ ಮತ್ತೆ ನಮ್ಮಲ್ಲಿಗೆ ಟ್ರಕ್ ಅಥವಾ ಎರಡೆರಡು ಸರಕು ಹಡಗುಗಳನ್ನು ಬಳಸಬೇಕಾದಾಗ ಖರ್ಚುವೆಚ್ಚ ದ್ವಿಗುಣವಾಗುತ್ತದೆ. ಈ ಹೊಸ ಬರ್ತ್ ದೊಡ್ಡ ಹಡಗುಗಳ ನಿರ್ವಹಣೆಗೆ ಪೂರಕವಾಗಿರಲಿದೆ ಎಂದರು.

ಸಭೆಯಲ್ಲಿ ಅಜಿತ್ ಕಾಮತ್, ಶೇಖರ ಪೂಜಾರಿ, ಪ್ರಶಾಂತ್ ಕೋಡಿಕಲ್, ಸುಧಾಕರ್, ಜೀತ್‌ಮಿಲನ್, ಹರೀಶ್, ರಾಮಚಂದರ್ ಬೈಕಂಪಾಡಿ, ನಿತ್ಯಾನಂದ ಪೈ, ಮನೋಹರ್ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ವಿಜಯಾ ಹೆಗಡೆ, ಮಂಡಳಿಯ ಜಿಲ್ಲಾ ಅಧಿಕಾರಿ ಡಾ. ರವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಬಿದ್ ಗದ್ಯಾಳ್, ಎಡಿಸಿ ಮಾಣಿಕ್ಯ ಉಪಸ್ಥಿತರಿದ್ದರು.

ಎಕರೆಗೆ 60 ರೂ.ನಂತೆ ಭೂಮಿ ನೀಡಿದ್ದೆವು!

ಎನ್‌ಎಂಪಿಎ ರಚನೆಗಾಗಿ ಅಂದು ಎಕರೆಗೆ 60 ರೂ.ನಂತೆ ಮೀನುಗಾರ ಕುಟುಂಬಗಳು ಜಾಗ ನೀಡಿದ್ದವು. ಆ ನಿಟ್ಟಿನಲ್ಲಿ ಮೀನುಗಾರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೀನುಗಾರಿಕಾ ಬಂದರು ನಿರ್ಮಿಸುವ ಕಾರ್ಯ ಕುಂಟುತ್ತಾ ಸಾಗಿದೆ. ಬಂದರು ನಾಡದೋಣಿ ಮೀನುಗಾರರಿಗೂ ಉಪಯೋಗ ಆಗುವ ರೀತಿಯಲ್ಲಿ ಅಭಿವೃದ್ಧಿಯಾಗಬೇಕು ಎಂದು ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಮುಖಂಡ ವಾಸುದೇವ ಬಿ. ಕರ್ಕೇರಾ ಆಗ್ರಹಿಸಿದರು.

ಕ್ಯಾನ್ಸರ್ ಪೀಡಿತರ ಚಿಕಿತ್ಸಾ ವೆಚ್ಚ ಭರಿಸಲು ಒತ್ತಾಯ

ನಿರ್ವಸಿತ ಮೀನುಗಾರರ ಸಂಯುಕ್ತ ಸಭಾದ ಮೋಹನ್ ಕೋಡಿಕಲ್ ಅವರು ಮಾತನಾಡಿ, ಬೈಕಂಪಾಡಿ, ಪಣಂಬೂರು ಹಾಗೂ ಸುರತ್ಕಲ್ ವ್ಯಾಪ್ತಿ ಯಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ, ಅವರ ಚಿಕಿತ್ಸಾ ವೆಚ್ಚವನ್ನು ಎನ್‌ಎಂಪಿಎ ಭರಿಸಬೇಕು. ಪರಿಸರ ಮಾಲಿನ್ಯ ಅಧಿಕಾರಿಗಳು ಚಿತ್ರಾಪುರಕ್ಕೆ ಆಗಮಿಸಿ ಅಲ್ಲಿನ ಕಲುಷಿತ ನೀರು ಪರಿಶೀಲಿಸಬೇಕು. ಸ್ಥಳೀಯರಿಗೆ ಹೊಸ ಬರ್ತ್‌ನಲ್ಲಿ ಉದ್ಯೋಗ ನೀಡಬೇಕು. ಗುಜರಾತ್‌ನ ಮೆರಿಟೈಮ್ ಬೋರ್ಡ್ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಗೆ ಎನ್‌ಎಂಪಿಎಯ ಸಿಎಸ್‌ಆರ್ ನಿಧಿ ಬಳಕೆಯಾಗುತ್ತಿದೆ. ಆ ನಿಧಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಗೊ ಬರ್ತ್ 17ರ ಯೋಜನಾ ವೆಚ್ಚ 214 ಕೋಟಿ ರೂ.

ಎನ್‌ಎಂಪಿಎಯಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಕಾರ್ಗೋ ಬರ್ತ್ ೧೭, ೨೧೪ ಕೋಟಿ ರೂ.ಗಳ ಯೋಜನೆಯಾಗಿದ್ದು, ವಾರ್ಷಿಕ ೬.೧೪ ಮೆಟ್ರಿಕ್ ಟನ್ ಸರಕು ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಲಿದೆ. ಪ್ರಸ್ತುತ ಬರ್ತ್ ನಂ. ೧೪ರಲ್ಲಿ ಆಳವಾದ ಡ್ರಾಫ್ಟ್ ಹಡಗುಗಳ ಕಂಟೇನರ್‌ಗಳನ್ನು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ದೊಡ್ಡ ಹಡಗುಗಳ ನಿರ್ವಹಣೆಗೆ ಹೊಸ ಬರ್ತ್ ಪ್ರಸ್ತಾವಿಸಲಾಗಿದ್ದು, ಇಲ್ಲಿ ಕಬ್ಬಿಣದ ಅದಿರು, ರಸಗೊಬ್ಬರ, ನದಿ ಮರಳು, ಬೆಂಟೋನೈಟ್, ಜಿಪ್ಸಮ್, ಯಂತ್ರೋಪಕರಣಗಳು ಇತ್ಯಾದಿಗಳನ್ನು ನಿರ್ವಹಿಸಲು ಪ್ರಸ್ತಾಪಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News