ತ್ರಾಸಿ, ಮರವಂತೆ ಬೀಚ್‌ನಲ್ಲಿ ಸಮುದ್ರದ ಅಲೆಗಳೊಂದಿಗೆ ಚೆಲ್ಲಾಟ!

Update: 2023-07-17 14:47 GMT

ಯೋಗೀಶ್ ಕುಂಭಾಸಿ

ಬೈಂದೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ವಾರಾಂತ್ಯದಲ್ಲಿ ಪ್ರಸಿದ್ಧ ಬೀಚ್‌ಗಳಲ್ಲಿ ಒಂದಾದ ಮರವಂತೆ, ತ್ರಾಸಿಗಳಲ್ಲಿ ರಾಜ್ಯ, ಹೊರರಾಜ್ಯದ ಪ್ರವಾಸಿಗರು ಸಮುದ್ರದ ಅಲೆಗಳ ಜೊತೆ ಕುಣಿದು ಕುಪ್ಪಳಿಸಿ, ನೀರಿನೊಂದಿಗೆ ಚೆಲ್ಲಾಟವಾಡಲು ಹೋಗಿ ಅನಾಹುತಕ್ಕೆ ಆಹ್ವಾನ ತಂದುಕೊಳ್ಳುತ್ತಿದ್ದಾರೆ.

ಸಮುದ್ರ ತೀರ ಆಸ್ವಾದಿಸಲು ಬರುವ ಪ್ರವಾಸಿಗರು ನೀರಿನ ಬೋರ್ಗರೆತಕ್ಕೆ ಮಾರುಹೋಗಿ ನೀರಿಗಿಳಿಯುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಬೀಚ್ ಸೆಕ್ಯೂರಿಟಿ ಹಾಗೂ ಹೋಂ ಗಾರ್ಡ್, ಪೊಲೀಸ್ ಸಿಬ್ಬಂದಿಗಳ, ಗ್ರಾ.ಪಂ ಅಳವಡಿಸಿದ ಸೂಚನಾ ಫಲಕಕ್ಕೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯು ತ್ತಿರುವುದು ಕಂಡುಬರುತ್ತಿದೆ. ಈ ಹಿಂದೆ ಈ ಸಮುದ್ರದಲ್ಲಿ ಆಗಿರುವ ಅನಾಹುತಗಳನ್ನು ಮನವರಿಕೆ ಮಾಡಿದರೂ ಬೆಲೆ ಕೊಡುತ್ತಿಲ್ಲ. ತಡೆಗೋಡೆಗಾಗಿ ಹಾಕಿದ ಕಲ್ಲು ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಹಳ ಅಪಾಯ ತಂದುಕೊಳ್ಳುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಸಾಕಷ್ಟು ಭಾಗದಲ್ಲಿ ಕಡಲ ಕೊರೆತ ಹಾಗೂ ನೆರೆ ಹಾವಳಿ ಸಮಸ್ಯೆಯಿದೆ. ಕಡಲ ನೀರಿಗೆ ಇಳಿಯಬಾರದಂತೆ ಜಿಲ್ಲಾಡಳಿತ ಆಗಸ್ಟ್ ತಿಂಗಳವರೆಗೆ ಜಿಲ್ಲೆಯ ಎಲ್ಲಾ ಬೀಚ್‌ಗಳಿಗೂ ಪ್ರವೇಶ ನಿಷೇಧ ಮಾಡಿ ಮುಂಜಾಗ್ರತ ಕ್ರಮ ಕೈಗೊಂಡರೂ ಪ್ರವಾಸಿಗರು ಮಾತ್ರ ಕ್ಯಾರೆ ಮಾಡದೆ ಎಂಜಾಯ್ ಹೆಸರಲ್ಲಿ ರಿಸ್ಕ್ ತೆಗೆದು ಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಗಮನಕ್ಕೆ ತಂದರೂ ಕೂಡ ಏನು ಪ್ರಯೋಜನವಾಗಿಲ್ಲ. ಇನ್ನಾದರೂ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಾಹನ ಸಂಚಾರಕ್ಕೆ ಅಡ್ಡಿ!

ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಹೆಚ್ಚಾಗಿ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತದೆ. ಸಮುದ್ರ ಕಂಡ ಕೂಡಲೇ ಏಕಾಏಕಿ ನಿಲ್ಲಿಸುವ ಕಾರಣ ಹಿಂಬದಿ ಸವಾರರಿಗೆ ಗೊಂದಲವಾಗಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ.

ಅಲ್ಲದೆ ತ್ರಾಸಿ, ಮರವಂತೆಗೆ ಆಗಮಿಸುವ ಪ್ರವಾಸಿಗರ ವಾಹನ ರಸ್ತೆಯ ಎರಡು ಬದಿಗಳಲ್ಲಿ ನಿಲ್ಲಿಸಿ, ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಮಾತ್ರವಲ್ಲ ಲಾರಿ ಸಹಿತ ಘನ ವಾಹನಗಳನ್ನು ರಸ್ತೆ ಇಕ್ಕೆಲಗಳಲ್ಲಿ ನಿಲ್ಲಿಸುವ ಕಾರಣ ಸಮುದ್ರ ಕಿನಾರೆ ಕಾಣದೆ ಬೀಚ್ ಸೌಂದರ್ಯಕ್ಕೂ ದಕ್ಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

"ಮಳೆಗಾಲ, ತೂಫಾನ್ ಸಂದರ್ಭದಲ್ಲಿ ಸಮುದ್ರ ಪ್ರಕ್ಷುಬ್ದವಾಗಿರುತ್ತದೆ. ಕಲ್ಲು ಬಂಡೆಗಳು ಜಾರುತ್ತವೆ. ಗಂಗೊಳ್ಳಿ 24X7 ಆಪತ್ಬಾಂಧವ, ಬೀಚ್ ಅಭಿವೃದ್ಧಿ ಸಮಿತಿ, ಹೋಂಗಾರ್ಡ್, ಪೊಲೀಸರು, ಸ್ಥಳೀಯ ಅಂಗಡಿಯವರು ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ಕೂಡ ಕೆಲವು ಮಂದಿ ಧಿಕ್ಕರಿಸಿ ಹೋಗಿ ಅಪಾಯ ತಂದುಕೊಳ್ಳುತ್ತಾರೆ. ದಿನೆದಿನೇ ಸಣ್ಣ ಪುಟ್ಟ ಅಹಿತಕರ ಘಟನೆಗಳೂ ಸಂಭವಿಸುತ್ತಲೇ ಇದೆ. ಪ್ರವಾಸಕ್ಕೆಂದು ಬರುವವರು ನೀರಿನ ಆಟಕ್ಕೆ ಇಳಿದು ಮಾತು ಕೇಳುವುದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರವಾಸಿಗರಲ್ಲಿ ಸ್ವಯಂ ಜಾಗೃತಿ ಅಗತ್ಯ.

-ಇಬ್ರಾಹಿಂ ಗಂಗೊಳ್ಳಿ, ಆಪತ್ಬಾಂಧವ 24X7, ಜೀವರಕ್ಷಕ ಹೆಲ್ಪ್‌ಲೈನ್‌





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News