ಒಂದೇ ಫ್ಲ್ಯಾಟ್‌ಗಾಗಿ ಹಲವರಿಂದ ಹಣ ಪಡೆದು ಮೋಸ: ಉಡುಪಿ ವಸತಿ ಸಮುಚ್ಚಯದ ನಿವಾಸಿಗಳಿಂದ ಆರೋಪ

Update: 2023-06-17 17:47 GMT

ಉಡುಪಿ, ಜೂ.17: ನಗರದ ಅಜ್ಜರಕಾಡು ವಾರ್ಡಿನ ಕಾಡಬೆಟ್ಟು ಎಂಬಲ್ಲಿರುವ ಶ್ರೀಲಕ್ಷ್ಮೀ ಇನ್ಟ್ರಾ ಸ್ಟ್ರಕ್ಚರ್‌ನ ಮಾಲಕ ಅಮೃತ್ ಶೆಣೈ ನಿರ್ಮಿಸಿರುವ 9 ಮಹಡಿಯ ವೈಜರ್ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಯನ್ನು 2014ರಿಂದ ಆರಂಭಿಸಿದ್ದು, ಇದರಲ್ಲಿ ಫ್ಲ್ಯಾಟ್ ಕೊಡುವುದಾಗಿ ನಂಬಿಸಿ ಒಂದೇ ಫ್ಲ್ಯಾಟ್‌ ಗೆ ಒಂದಕ್ಕಿಂತ ಹೆಚ್ಚು ಮಂದಿಯಿಂದ ಹಣ ಪಡೆದು, ಯಾರಿಗೂ ಈವರೆಗೆ ನೋಂದಾಣಿ ಮಾಡಿ ಕೊಟ್ಟಿಲ್ಲ. ಅಲ್ಲದೆ ವಸತಿ ಸಮುಚ್ಚಯಕ್ಕೆ ಮಾಡಿರುವ ಸಾಲವನ್ನು ಮರು ಪಾವತಿಸದೆ 36 ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದ್ದಾರೆ ಎಂದು ವಸತಿ ಸಮುಚ್ಚಯದ ನಿವಾಸಿಗಳು ಆರೋಪಿಸಿದ್ದಾರೆ.

ವಸತಿ ಸಮುಚ್ಚಯದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸತಿ ಸಮುಚ್ಚಯದ ನಿವಾಸಿ, ವಕೀಲ ಗಿರೀಶ್ ಐತಾಳ್, ಈ ವಸತಿ ಸಮುಚ್ಚಯದ ಕಾಮಗಾರಿ ಇನ್ನು ಕೂಡ ಪೂರ್ಣಗೊಂಡಿಲ್ಲ. ಆದರೂ ಇಲ್ಲಿರುವ 36 ಫ್ಲ್ಯಾಟ್‌ಗಳ ಪೈಕಿ 30 ಫ್ಲ್ಯಾಟ್‌ಗಳಲ್ಲಿ ಸುಮಾರು 150 ಮಂದಿ ವಾಸ ಮಾಡಿಕೊಂಡಿದ್ದಾರೆ. ಒಂದು ಫ್ಲ್ಯಾಟ್‌ಗೆ ಎರಡು ಮೂರು ಮಂದಿಯಿಂದಲೂ ಹಣ ಪಡೆದಿರುವುದರಿಂದ ಅವರು ಬಂದು ವಾಸ ಮಾಡಬಹುದು ಎಂಬ ಭೀತಿಯಲ್ಲಿ ಇವರೆಲ್ಲ ಬಂದು ಕುಳಿತಿದ್ದಾರೆ. ಇವರು ವಿದ್ಯುತ್, ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಬದುಕು ನಡೆಸುತ್ತಿದ್ದಾರೆ ಎಂದರು.

ಒಂದು ಫ್ಲ್ಯಾಟ್‌ಗೆ ಒಂದೇ ಬ್ಯಾಂಕಿನಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಸಾಲ ಕೂಡ ಮಂಜೂರಾಗಿದೆ. ಈ ಬಗ್ಗೆ ಕೆನರಾ ಬ್ಯಾಂಕಿನ ಉಪಮಹಾಪ್ರಬಂಧಕರಿಗೂ ದೂರು ನೀಡಲಾಗಿದೆ. ಹೀಗೆ ಹಣ ಕೊಟ್ಟು ಫ್ಲ್ಯಾಟ್ ಸಿಗದವರು 10ಕ್ಕೂ ಅಧಿಕ ಮಂದಿ ಇದ್ದಾರೆ. ವಸತಿ ಸಮುಚ್ಚಯದ ಕಾಮಗಾರಿ ಇನ್ನು ಶೇ.40ರಷ್ಟು ಬಾಕಿ ಇದೆ. ಆರು ಫ್ಲ್ಯಾಟ್‌ಗಳ ಕಾಮಗಾರಿ ಇನ್ನೂ ನಡೆದಿಲ್ಲ ಎಂದು ಅವರು ದೂರಿದರು.

ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇತ್ತೀಚೆಗೆ ಅವರ ವಿರುದ್ಧ ಈ ಫ್ಲ್ಯಾಟ್‌ಗೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಕೂಡ ದಾಖಲಾಗಿದೆ. ಈ ನಿಟ್ಟಿನಲ್ಲಿ ಜೂ.19ರಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಮತ್ತು ಕಾನೂನು ಹೋರಾಟಕ್ಕಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು. ಇವರಿಂದ ಇನ್ನು ಯಾರು ಕೂಡ ಮೋಸ ಹೋಗಬಾರದು ಮತ್ತು ನಮಗೆ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದರು.

ವಸತಿ ಸಮುಚ್ಚಯದ ನಿವಾಸಿಗಳಾದ ಅಬ್ದುಲ್ ರಝಾಕ್, ಪಾಂಡುರಂಗ ರಾವ್, ಜೆಸಿಂತಾ ಮೆಂಡೋನ್ಸಾ, ಜೋಷಿತಾ ಮಥಾಯಸ್ ಮೊದಲಾದವರು ತಮ್ಮ ಅಳಲನ್ನು ತೋಡಿಕೊಂಡರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News