ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜಿಗೆ ಪೂರ್ಣ ಸಹಕಾರ: ಯಶ್ಪಾಲ್ ಸುವರ್ಣ

Update: 2023-06-30 14:59 GMT

ಉಡುಪಿ, ಜೂ.30:ಮುಂದಿನ ಎರಡು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

ವೈದ್ಯರ ದಿನಾಚರಣೆಯ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಶ್ರಯದಲ್ಲಿ ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಆಯೋಜಿಸಲಾದ ಜಿಲ್ಲೆಯ ಹಿರಿಯ ವೈದ್ಯ ದಂಪತಿಗಳಿಗೆ ಹಾಗು ವೈದ್ಯರಿಗೆ ಗೌರವ ಪುರಸ್ಕಾರ -2023 ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯ ಹಿರಿಯ ವೈದ್ಯ ದಂಪತಿಗಳಾದ ಡಾ.ಹಂಗಳೂರು ರಾಘವೇಂದ್ರ ಹೆಬ್ಬಾರ್ ಮತ್ತು ಡಾ.ಪುಷ್ಪಗಂಧಿನಿ, ಕಾರ್ಕಳದ ಡಾ.ಕೆ.ಆರ್. ಜೋಶಿ ಮತ್ತು ಡಾ. ರೇಣುಕಾ ಆರ್. ಜೋಶಿ ಅಲ್ಲದೇ ಹಿರಿಯ ವೈದ್ಯರಾದ ಉಡುಪಿಯ ಪ್ರೊ.ಎ. ರಾಜ, ಡಾ. ಎನ್. ಆರ್. ರಾವ್, ಕುಂದಾಪುರದ ಡಾ. ರಂಜಿತ್ ಕುಮಾರ್ ಶೆಟ್ಟಿ ಹಾಗೂ ಉಡುಪಿಯ ಡಾ.ಡೊನಾಲ್ಡ್ ಸೈಮನ್ಸ್ ಇವರನ್ನು 2023ರ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡ ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ ಪಿ.ವಿ ಭಂಡಾರಿ ಮಾತನಾಡಿ, ಸಮಾಜ ವೈದ್ಯರನ್ನು ನೋಡುವಂತಹ ದೃಷ್ಟಿಕೋನ ಬದಲಾಗಬೇಕು. ಆಸ್ಪತ್ರೆಗಳಲ್ಲಿ ನಡೆಯುವ ರೋಗಿಗಳ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ ಎನ್ನುವ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಉಪ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸಮಾರಂಭದ ಸಂಚಾಲಕ ವಿಘ್ನೇಶ್ವರ ಅಡಿಗ, ಬೈಂದೂರು ಕಸಾಪ ಅಧ್ಯಕ್ಷ ಡಾ. ರಘು ನಾಯ್ಕ ಉಪಸ್ಥಿತರಿದ್ದರು.

ಮಧುಸೂದನ್ ಹೇರೂರು, ಸತೀಶ್ ಕೊಡವೂರು ಸನ್ಮಾನಿತರನ್ನು ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News