ಅಂಗನವಾಡಿ ನೌಕರರಿಗೆ ಗುಣಮಟ್ಟದ ಮೊಬೈಲ್ ನೀಡಿ: ಸುನಂದಾ

Update: 2023-07-16 13:11 GMT

ಉಡುಪಿ: ಅಂಗನವಾಡಿ ನೌಕರರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡಬೇಕು. ಆಗ ಮಾತ್ರ ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೆ ನಾವು ಯಾವುದೇ ಕೆಲಸ ಮಾಡುವುದಿಲ್ಲ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಮೊಬೈಲ್ ನೀಡಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಉಡುಪಿ, ಕಾಪು, ಬ್ರಹ್ಮಾವಾರ, ಕುಂದಾಪುರ ತಾಲೂಕುಗಳ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಂಗನವಾಡಿ ನೌಕರರಗೆ ಏಕರೂಪದ ಸೇವಾ ನಿಯಮಗಳನ್ನು ಕೂಡಲೇ ರೂಪಿಸಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು. ಹೊಸ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಐಸಿಡಿಸಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಮ್ಮ ಸಂಘಟನೆ ಇನ್ನಷ್ಟು ತೀವ್ರ ಹೋರಾಟ ಗಳನ್ನು ಮಾಡಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಹಿಸಿದ್ದರು. ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ, ಜಿಲ್ಲಾ ಖಜಾಂಚಿ ಯಶೋಧಾ ಕೆ., ಬ್ರಹ್ಮಾವರ ತಾಲೂಕು ಮುಖಂಡರಾದ ಜಯಲಕ್ಷ್ಮಿ, ಸರೋಜ, ಸರೋಜಿನಿ, ಉಡುಪಿ ಮುಖಂಡರಾದ ಪುಷ್ಪ, ಪ್ರಮೀಳಾ, ಕುಂದಾ ಪುರ ಮುಖಂಡರಾದ ಆಶಾ ಶೆಟ್ಟಿ, ಶಾಂತ, ಭಾಗ್ಯ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್., ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News