ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನವೀಕೃತ ಮನೆ ಹಸ್ತಾಂತರ

Update: 2023-06-23 15:36 GMT

ಉಡುಪಿ, ಜೂ.23: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾ ಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಅಮಾಸೆಬೈಲಿನ ಚೇತನ್ ಮತ್ತು ನಯನಾ ಇವರಿಗೆ ಉಡುಪಿಯ ಪಂಚಮಿ ಟ್ರಸ್ಟ್ ಇದರ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಮನೆ ‘ನಂದಾದೀಪ’ವನ್ನು ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ರಾದ ಡಾ.ಹರಿಶ್ಚಂದ್ರ ಹಾಗೂ ಲಕ್ಷ್ಮೀ ಹರಿಶ್ಚಂದ್ರ ಗುರುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹರಿಶ್ಚಂದ್ರರು ಬಡ ವಿದ್ಯಾರ್ಥಿ ಗಳನ್ನು ಹುಡುಕಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಯಕ್ಷಗಾನ ಕಲಾರಂಗ ಸಂಸ್ಥೆ ಎಲ್ಲರಿಗೂ ಮಾದರಿಯಾಗಿದೆ. ಸೇವಾಮನೋಭಾವ ಹೊಂದಿರುವ ಸಂಘಟನೆಯ ಕಾರ್ಯಕರ್ತರ ಪಡೆ ಹೆಮ್ಮೆ ತರುವಂತಿದೆ ಎಂದರು.

ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೊಂದರಂತೆ ಐದು ಮನೆಗಳ ನಿರ್ಮಾಣಕ್ಕ ನಮ್ಮ ಟ್ರಸ್ಟ್ ಪ್ರಾಯೋಜಕತ್ವ ವಹಿಸಲಿದೆ ಎಂದು ಪಂಚಮಿ ಟ್ರಸ್ಟ್‌ನ ಅಧ್ಯಕ್ಷರೂ ಆದ ಡಾ.ಹರಿಶ್ಚಂದ್ರ ಭರವಸೆ ನೀಡಿದರು.

ನಾಗರತ್ನ ಮತ್ತು ಮಕ್ಕಳಾದ ಚೇತನ್ ಹಾಗೂ ನಯನಾ ಮಾತನಾಡಿ ಸಂಸ್ಥೆಯ ಮೂಲಕ ನೆರವು ನೀಡಿದ ದಾನಿಗಳಿಗೂ, ವಿದ್ಯಾಪೋಷಕ್ ಸಂಸ್ಥೆಗೂ ನಾವು ಋಣಿಯಾಗಿರುತ್ತೇವೆ. ಮುಂದೆ ನಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ದೊರೆತ ಬಳಿಕ ಸಂಸ್ಥೆಯ ಮೂಲಕ ನೆರವು ನೀಡುತ್ತೇವೆಂದು ನುಡಿದರು.

ಮುಖ್ಯ ಅತಿಥಿಗಳಾಗಿ ಸಾಮಾಜಸೇವೆಯಲ್ಲಿ ತೊಡಗಿಸಿಕೊಂಡ ಶಂಕರ ಐತಾಳ್ ಹಾಗೂ ಪಂಚಾಯತ್ ಉಪಾಧ್ಯಕ್ಷ ಕೃಷ್ಣ ಪೂಜಾರಿ ಭಾಗವಹಿಸಿ ದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೆ.ಸದಾಶಿವ ರಾವ್, ಬಿ. ಭುವನ ಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ನಟರಾಜ ಉಪಾಧ್ಯ, ಕಿಶೋರ್ ಸಿ.ಉದ್ಯಾವರ, ಅಶೋಕ್ ಎಂ., ಗಣೇಶ್ ಬ್ರಹ್ಮಾವರ, ಕೆ.ಅಜಿತ್ ಕುಮಾರ್, ಸುದರ್ಶನ ಬಾಯರಿ ಹಾಗೂ ಯಕ್ಷಗಾನ ಕಲಾದ ಜೋಗು ಕುಲಾಲ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 40ನೆಯ ಮನೆಯಾಗಿದೆ. ಇನ್ನೂ 8 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News