ಭಾರೀ ಮಳೆ: ಉಡುಪಿ ನಗರದ ಹಲವು ಪ್ರದೇಶಗಳು ಜಲಾವೃತ್ತ

Update: 2023-07-05 14:11 GMT

ಉಡುಪಿ, ಜು.5: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರದ ಹಲವು ಪ್ರದೇಶಗಳು ಜಲಾವೃತ ಗೊಂಡಿದ್ದು, ಮೂಡನಿಡಂಬೂರು ಗರಡಿ ಸೇರಿದಂತೆ ನೂರಾರು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿವೆ.

ನಗರದಲ್ಲಿ ಹರಿಯುವ ಇಂದ್ರಾಣಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಕಲ್ಸಂಕ ತೋಡಿನ ನೀರು ಸಾಗುವ ಮೂಡನಿಂಬೂರು ಶ್ರೀಬ್ರಹ್ಮ ಬೈದರ್ಕಳ ಗರೋಡಿ ಸೇರಿದಂತೆ ಹಲವು ಮನೆಗಳ ಸುತ್ತಮುತ್ತ ನೀರು ತುಂಬಿದೆ. ಇದರಿಂದ ಇಲ್ಲಿನ ಸುಮಾರು 10-20 ಮನೆಯವರು ಹೊರಗಡೆ ಬರಲಾರದೆ ಜಲ ದಿಗ್ಬಂಧನದಲ್ಲಿದ್ದಾರೆ.

‘ಪ್ರತಿವರ್ಷದಂತೆ ಈ ವರ್ಷವೂ ಗರಡಿ ಪರಿಸರದಲ್ಲಿ ನೆರೆ ಬಂದಿದ್ದು, ಗರೋಡಿ ಆವರಣದಲ್ಲಿ ನೀರಿನಿಂದ ತುಂಬಿದೆ. ಇದರಿಂದ ಗರೋಡಿಗೆ ಪ್ರತಿ ದಿನ ಪೂಜೆ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ ನಮ್ಮ ಮನೆ ಕೂಡ ತಗ್ಗು ಪ್ರದೇಶ ದಲ್ಲಿರುವುದರಿಂದ ಜಲಾವೃತ್ತಗೊಂಡಿದೆ. ಈ ಪ್ರದೇಶದಲ್ಲಿ ಹಲವು ಮನೆಗಳು ನಿರ್ಮಾಣವಾಗಿರುವುದರಿಂದ ಮತ್ತ ಗದ್ದೆಗೆ ಮ್ಣಣ್ಣು ತುಂಬಿಸಿದ ಪರಿಣಾಮ ನೀರು ಹೋಗದಲು ವ್ಯವಸ್ಥೆ ಇಲ್ಲದೆ ನೆರೆ ಬರುತ್ತದೆ’ ಎಂದು ಗರೋಡಿಯ ಪ್ರಧಾನ ಅರ್ಚಕ ಗಂಗಾಧರ ಪೂಜಾರಿ ತಿಳಿಸಿದ್ದಾರೆ.

ವಲಸೆ ಕಾರ್ಮಿಕರ ಪರದಾಟ

ಮೂಡನಿಡಂಬೂರು ರಸ್ತೆ ಕೂಡ ನೀರಿನಿಂದ ಆವೃತ್ತಗೊಂಡಿರುವುದರಿಂದ ಬನ್ನಂಜೆ- ನಿಟ್ಟೂರು ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಇದರಿಂದ ನೂರಾರು ವಲಸೆ ಕಾರ್ಮಿಕರ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ.

ನಿಟ್ಟೂರಿನಲ್ಲಿ ವಾಸವಾಗಿರುವ ನೂರಾರು ವಲಸೆ ಕಾರ್ಮಿಕರು ಇದೇ ಮಾರ್ಗವನ್ನು ನಂಬಿಕೊಂಡು ಕೂಲಿ ಕೆಲಸಕ್ಕಾಗಿ ಉಡುಪಿ ನಗರಕ್ಕೆ ನಡೆದು ಕೊಂಡು ಹೋಗುತ್ತಾರೆ. ಆದರೆ ಇದೀಗ ಈ ರಸ್ತೆ ನೆರೆ ನೀರಿನಿಂದ ತುಂಬಿ ರುವುದರಿಂದ ನಡೆದುಕೊಂಡು ಹೋಗುವುದು ಬಹಳ ಅಪಾಯಕಾರಿ ಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವೊಂದು ನೀರು ಪಾಲಾಗಿತ್ತು.

‘ಪ್ರತಿ ಮಳೆಗಾಲದಲ್ಲೂ ಈ ರಸ್ತೆಯಲ್ಲಿ ನೀರು ತುಂಬುತ್ತದೆ. ಇಲ್ಲಿಂದ ನಮಗೆ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಗಂಡಸರು ಹೇಗಾದರೂ ಇಲ್ಲಿ ನಡೆದು ಕೊಂಡು ಹೋಗುತ್ತಾರೆ. ಮಹಿಳೆಯರಿಗೂ ತುಂಬಾ ತೊಂದರೆಯಾಗುತ್ತದೆ. ಈ ರಸ್ತೆ ಇಲ್ಲದಿದ್ದರೆ ಸುಮಾರು ಐದು ಕಿ.ಮೀ. ದೂರವಾಗಿ ಬಸ್‌ನಲ್ಲಿ ಬರಬೇಕಾಗುತ್ತದೆ. ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೊಪ್ಪಳ ಜಿಲ್ಲೆಯ ವಲಸೆ ಕಾರ್ಮಿಕ ಮರಿಯಪ್ಪ ಒತ್ತಾಯಿಸಿದ್ದಾರೆ.

ಹಲವು ತಗ್ಗುಪ್ರದೇಶಗಳಲ್ಲಿ ನೀರು

ಉಡುಪಿ ನಗರದ ಗುಂಡಿಬೈಲು, ಬೈಲಕರೆ, ಮಣಿಪಾಲ ಇಂಡಸ್ಟ್ರೀಯಲ್ ಏರಿಯಾ ಹಾಗೂ ಸಿಟಿ ಆಸ್ಪತ್ರೆ ಸಮೀಪ ಸೇರಿದಂತೆ ಹಲವು ತಗ್ಗು ಪ್ರದೇಶ ಗಳಲ್ಲೂ ಕೃತಕ ನೆರೆ ಉಂಟಾಗಿ ಸ್ಥಳೀಯರು ಪರದಾಡುವಂತಾಯಿತು.

ಬೈಲಕೆರೆಯಲ್ಲಿ ನೆರೆಯಿಂದ ಕೆಲವು ಮನೆಗಳ ಅಂಗಳದವರೆಗೂ ನೀರು ನುಗ್ಗಿರುವುದು ಕಂಡುಬಂದಿದೆ. ಗುಂಡಿಬೈಲುವಿನ ತಗ್ಗು ಪ್ರದೇಶಗಳು ಜಲಾವೃತ್ತ ಗೊಂಡು ವಾಹನ ಸಂಚಾರಕ್ಕೂ ತೊಂದರೆ ಆಯಿತು. ಮಲ್ಪೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃತಕ ನೆರೆಯಿಂದ ಸಮಸ್ಯೆ ಎದುರಾಯಿತು. ಮಣಿಪಾಲ ಇಂಡಸ್ಟ್ರೀ ಯಲ್ ಏರಿಯಾದಲ್ಲಿ ಉಂಟಾದ ಕೃತಕ ನೆರೆಯನ್ನು ಮಣ್ಣು ಬಿಡಿಸಿಕೊಡುವ ಮೂಲಕ ತೆರವುಗೊಳಿಸಲಾಯಿತು.

ನಗರದ ಸಿಟಿ ಆಸ್ಪತ್ರೆ ಮತ್ತು ಭಾಸ್ಕರ್ ಗ್ಯಾರೇಜ್ ಕಂಪೌಂಡಿನ ಮಧ್ಯೆ ಇರುವ ತೋಡಿನಲ್ಲಿ ನೀರು ಸರಾಗಿವಾಗಿ ಹರಿಯಲು ವ್ಯವಸ್ಥೆ ಇಲ್ಲದ ಕಾರಣ ಸಮೀಪ ದೇವಸ್ಥಾನ ಹಾಗೂ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸ್ಥಳೀಯ ನಗರಸಭೆ ಸದಸ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಗ್ಗುಪ್ರದೇಶ ಆಗಿರುವುದರಿಂದ ಪ್ರತಿವರ್ಷ ನೆರೆಯ ಸಮಸ್ಯೆ ಕಾಡುತ್ತದೆ. ಇಂದು ಬೆಳಗ್ಗೆಯಿಂದ ನೀರು ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಮುಂದು ವರಿದರೆ ಜಿಲ್ಲಾಡಳಿತ ಇಲ್ಲಿ ದೋಣಿ ವ್ಯವಸ್ಥೆ ಮಾಡಬೇಕಾಗುತ್ತದೆ. ಅಲ್ಲದೆ ಇಲ್ಲಿನ ಸಂಪರ್ಕ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಪೊಲೀಸರನ್ನು ನಿಯೋಜಿಸಿ ವಲಸೆ ಕಾರ್ಮಿಕರು ಹೋಗದಂತೆ ತಡೆಯಬೇಕು. ಇಲ್ಲದಿದ್ದರೆ ಇಲ್ಲಿ ಜೀವಹಾನಿಯಾಗುವುದು ನಿಶ್ಛಿತ.

-ಪ್ರಶಾಂತ್ ಮೂಡನಿಡಂಬೂರು

‘ವಿಪತ್ತು ನಿರ್ವಹಣೆಗೆ ಅಗ್ನಿಶಾಮಕ ದಳದ ತಂಡ ಸನ್ನದ್ಧವಾಗಿದೆ. ಏಳು ಬೋಟು, ಮನೆ, ರಸ್ತೆಗಳ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಲು ಬೇಕಾದ ಸಲಕರಣೆಗಳಿವೆ. ನೆರೆ ಬಂದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಸ್ಪಂದಿಸಲಾಗುವುದು. ಉಡುಪಿ ಜಿಲ್ಲೆಯ ಐದು ಅಗ್ನಿಶಾಮಕ ಠಾಣೆಯ ಒಟ್ಟು 90 ಮಂದಿ ಸಿಬ್ಬಂದಿ ಈ ಕಾಯರ್ಯ ತೊಡಗಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ’

-ವಸಂತ ಕುಮಾರ್, ಅಗ್ನಿಶಾಮಕದಳ ಅಧಿಕಾರಿ ಉಡುಪಿ ಜಿಲ್ಲೆ.

ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ

ಕಳೆದ ಮೂರು ದಿನಗಳಲ್ಲಿ ಮಳೆಗಾಳಿಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 79 ವಿದ್ಯುತ್ ಕಂಬಗಳು ಹಾಗೂ 4 ಟ್ರಾನ್ಸ್‌ಫಾರ್ಮರ್‌ಗಳು ಧರೆಗೆ ಉರುಳಿವೆ ಎಂದು ಮೆಸ್ಕಾಂ ಅಧೀಕ್ಷಕರು ತಿಳಿಸಿದ್ದಾರೆ.

ಅದೇ ರೀತಿ ಸುಮಾರು 1.69 ಕಿ.ಮೀ. ಉದ್ದದ ವಿದ್ಯುತ್ ತಂತಿಗೆ ಹಾನಿ ಯಾಗಿದ್ದು, ಇದರಿಂದ ಮೆಸ್ಕಾಂಗೆ ಸುಮಾರು 18.86ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಡುಪಿ ನಗರಸಭೆ ಕಾರ್ಯಪಡೆಯಿಂದ ಕಾರ್ಯಾಚರಣೆ

ಮಳೆಯ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯಿಂದ ರಚಿಸಲಾದ ಕಾರ್ಯ ಪಡೆಯು ಮಣಿಪಾಲ, ಉಡುಪಿ ಹಾಗೂ ಮಲ್ಪೆಗಳಲ್ಲಿ ತುರ್ತು ಕಾರ್ಯಾಚರಣೆಗಳನ್ನು ನಡೆಸಿದೆ.

ಈ ಕಾರ್ಯಪಡೆಯಲ್ಲಿ ಮೂರು ತಂಡಗಳನ್ನು ರಚಿಸಿದ್ದು, ಇದರಲ್ಲಿ ಒಟ್ಟು 30 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಸೂಪರ್ ವೈಸರ್, ವಾಹನ, ಜೆಸಿಬಿ ಕೂಡ ಈ ತಂಡಗಳಿಗೆ ನೀಡಲಾಗಿದೆ. ಆ ತಂಡಗಳಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕರು, ಇಂಜಿನಿಯರ್ಸ್‌ಗಳಿರುತ್ತಾರೆ. ದಿನದ 24 ಗಂಟೆಗಳ ಕಾಲ ಕೂಡ ಕಾರ್ಯಾಚರಿಸುವ ಈ ತಂಡದಲ್ಲಿ ರಾತ್ರಿ ಪಾಳಿಯಲ್ಲೂ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೌರಾಯುಕ್ತ ಆರ್.ಪಿ. ನಾಯ್ಕ್ ತಿಳಿಸಿದ್ದಾರೆ.

ಈಗಾಗಲೇ ನಗರದಲ್ಲಿರುವ 149 ಅಪಾಯಕಾರಿ ಮರಗಳನ್ನು ಗುರುತಿಸ ಲಾಗಿದ್ದು, ಇದರ ಗೆಲ್ಲು ಕತ್ತರಿಸುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ 12 ಮರಗಳ ಗೆಲ್ಲನ್ನು ಕತ್ತರಿಸಿದ್ದು, ಇನ್ನು 15 ದಿನಗಳಲ್ಲಿ ಎಲ್ಲ 149 ಮರಗಳ ಕೆಲ್ಲು ಕಡಿಯುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಎಲ್ಲಿಯಾದರೂ ಮರ ಬಿದ್ದರೂ ಈ ಕಾರ್ಯಪಡೆ ಕೂಡಲೇ ತೆರಳಿ ತೆರವುಗೊಳಿಸುವ ಕಾರ್ಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

"ಉಡುಪಿ ನಗರಸಭೆಯ ವ್ಯಾಪ್ತಿಯ ಹಲವು ತಗ್ಗು ಪ್ರದೇಶ, ಗದ್ದೆಗಳಲ್ಲಿ ನೀರು ನಿಂತಿದ್ದು, ಆದರೆ ಯಾವುದೇ ಮನೆ ಹಾಗೂ ಜೀವಕ್ಕೆ ಹಾನಿಯಾಗಿಲ್ಲ. ನೀರು ನಿಂತ ಕೆಲವು ಪ್ರದೇಶಗಳಿಗೆ ತೆರಳಿದ ಕಾರ್ಯಪಡೆ ತಂಡ ಮಣ್ಣು ತೆರವುಗೊಳಿಸಿ ನೀರು ಹರಿಯುವಂತೆ ಮಾಡಿದೆ. ಅದೇ ರೀತಿ ರಸ್ತೆಯಲ್ಲಿ ನಿಂತ ನೀರನ್ನು ಬಿಡಿಸಿ ಕೊಡುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ".

-ಆರ್.ಪಿ.ನಾಯ್ಕ್, ಪೌರಾಯುಕ್ತರು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News