ಬೈಂದೂರು: ಭಾರೀ ಮಳೆಗೆ ಮನೆ ಸಂಪೂರ್ಣ ಹಾನಿ; 5 ಲಕ್ಷ ರೂ.ನಷ್ಟ
ಉಡುಪಿ, ಜು.10: ಬೈಂದೂರು ತಾಲೂಕು ಯಳಜಿತ್ ಗ್ರಾಮದಲ್ಲಿ ಶುಕ್ರವಾರದ ಭಾರೀ ಮಳೆಗೆ ಭಾಗಶ: ಹಾನಿಗೊಳಗಾಗಿದ್ದ ನಾರಾಯಣ ಪೂಜಾರಿ ಎಂಬವರ ಮನೆ, ಮುಂದುವರಿದ ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಬೈಂದೂರು ತಹಶೀಲ್ದಾರ್ ವರದಿ ಮಾಡಿದ್ದಾರೆ.
ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಮದ ರವಿರಾಜ್ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರವೊಂದು ಬಿದ್ದು ಭಾಗಶ: ಹಾನಿಗೊಳಗಾಗಿದ್ದು, ಇದರಿಂದ 50,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನ ಶಿರೂರು ಗ್ರಾಮದ ಇಬ್ರಾಹಿಂ ಇವರ ಜಾನುವಾರೊಂದು ಮನೆಯ ಸಮೀಪದ ಗುಂಡಿಗೆ ಬಿದ್ದು ಮೃತಪಟ್ಟಿದೆ. ಗಾಳಿಯೊಂದಿಗೆ ಸತತವಾಗಿ ಸುರಿದ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಭತ್ತದ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿರುವ ಬಗ್ಗೆಯೂ ವರದಿಗಳು ಬಂದಿವೆ.
ಜಿಲ್ಲೆಯಲ್ಲಿ 23.2ಮಿ.ಮೀ. ಮಳೆ: ಸತತ ಮೂರು ದಿನಗಳ ಧಾರಾಕಾರ ಮಳೆಯ ಬಳಿಕ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 23.2ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ದಿನದ ಅತ್ಯಧಿಕ ಮಳೆ ಬೈಂದೂರಿನಲ್ಲಿ 30.5ಮಿ.ಮೀ. ದಾಖಲಾಗಿದೆ. ಉಳಿದಂತೆ ಹೆಬ್ರಿಯಲ್ಲಿ 26.1, ಕುದಾಪುರದಲ್ಲಿ 25.2, ಉಡುಪಿಯಲ್ಲಿ 22.1, ಕಾರ್ಕಳದಲ್ಲಿ 19.7, ಕಾಪು 18.2 ಹಾಗೂ ಬ್ರಹ್ಮಾವರದಲ್ಲಿ 15.1ಮಿ.ಮೀ. ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರದಿಂದ ಶನಿವಾರದವರೆಗೆ ಎಲ್ಲೋ ಅಲರ್ಟ್‌ನ್ನು ಘೋಷಿಸಲಾಗಿದೆ. ಬಳಿಕದ ದಿನದಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು- ಮಿಂಚು ಸಹಿತ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ. ಸದ್ಯಕ್ಕೆ ಮೀನುಗಾರರಿಗೆ ಯಾವುದೇ ಎಚ್ಚರಿಕೆಗಳನ್ನು ಹವಾಮಾನ ಇಲಾಖೆ ನೀಡಿಲ್ಲ.
ಜಿಲ್ಲೆಯ ಬಜೆ ಡ್ಯಾಮ್‌ನಲ್ಲಿ ಪ್ರಸ್ತುತ ನೀರಿನ ಮಟ್ಟ 5.85 ಮೀ.ಆಗಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ ನೀರಿನ ಮಟ್ಟ 4.87ಮೀ. ಆಗಿದೆ.