ಮಂಗಳೂರು: ಜನಸ್ಪಂದನ ಸಭೆಯಲ್ಲಿ ಸಾರಿಗೆ ಅಧಿಕಾರಿಗಳಿಗೆ ಅಹವಾಲುಗಳ ಮಹಾಪೂರ

Update: 2023-06-28 13:37 GMT

ಮಂಗಳೂರು, ಜೂ.28: ಟ್ರಿಪ್ ಕಟ್ ಮಾಡಿ ಬಸ್‌ಗಳ ಸಂಚಾರ, ಪರ್ಮಿಟ್ ಪಡೆದ ರೂಟ್‌ನಲ್ಲಿಯೇ ಸಂಚರಿಸದ ಬಸ್ಸುಗಳು, ಪ್ರಯಾಣಿಕರಿಗೆ ಸಿಗದ ಟಿಕೆಟ್, ಮೂರು ತಿಂಗಳಾದರೂ ಸಿಗದ ಡ್ರೈವಿಂಗ್ ಲೈಸೆನ್ಸ್, ನಂಬರ್ ಪ್ಲೇಟ್‌ಗಳಲ್ಲಿ ಹೆಸರು ನಮೂದು!

ಹೀಗೆ ದೂರು, ಅಹವಾಲುಗಳ ಮಹಾಪೂರವೇ ಬುಧವಾರ ಮಂಗಳೂರಿನ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಹರಿದು ಬಂದಿತ್ತು.

ಮಂಗಳೂರು ಉಪಸಾರಿಗೆ ಆಯುಕ್ತ ಜಾನ್ ಮಿಸ್ಕಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪರ್ಮಿಟ್ ಪಡೆದ ಕೆಲವೊಂದು ರೂಟ್‌ಗಳಲ್ಲಿ ಖಾಸಗಿ ಬಸ್ಸುಗಳು ಸಂಚರಿಸುತ್ತಿಲ್ಲ. ಅಲ್ಲಿ ಸರಕಾರಿ ಅಥವಾ ಖಾಸಗಿಯವರ ಪರ್ಮಿಟ್ ಬದಲಾಯಿಸಬೇಕು. ಪ್ರಯಾಣಿಕರಿಗೆ ಟಿಕೆಟ್ ಸರಿಯಾಗಿ ನೀಡಬೇಕು. ಪ್ರಯಾಣಿಕರಿಂದ ಕನಿಷ್ಠ ದರಕ್ಕಿಂತ ಅಧಿಕ ದರ ವಸೂಲಿ ಮಾಡುವ ರಿಕ್ಷಾ ಚಾಲಕರ ವಿರುದ್ಧ ಕ್ರಮ ವಹಿಸಬೇಕು. ಡ್ರೈವಿಂಗ್ ಲೈಸೆನ್ಸ್ ನಿಗದಿತ ಸಮಯದಲ್ಲಿ, ಸಲ್ಲಿಕೆಯಾದ ಅರ್ಜಿ ಆಧಾರದಲ್ಲಿ ನೀಡಬೇಕು. ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆ ಬಗ್ಗೆ ಇಲಾಖೆಗೆ ದೂರು ನೀಡಿದಾಗ, ವಿಚಾರಣೆಯ ವೇಳೆ ದೂರುದಾರರನ್ನು ಕರೆಸಿ ಅವರಿಗೂ ಮಾಹಿತಿ ಒದಗಿಸಬೇಕು. ಬಸ್ ಅಥವಾ ರಿಕ್ಷಾದಲ್ಲಿ ಕರ್ಕಶ ಹಾರ್ನ್‌ಗೆ ಅವಕಾಶ ನೀಡಬಾರದು. ಸಾರಿಗೆ ಪ್ರಾಧಿಕಾರ ಸಭೆಯನ್ನು ನಿರಂತರವಾಗಿ ನಡೆಸಬೇಕು ಎಂಬ ಹಲವು ಬೇಡಿಕೆ, ಆಗ್ರಹಗಳು ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದವು.

ಶಾಲಾ ವಾಹನ ಮಾಲಕರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ ಮಾತನಾಡಿ, ಖಾಸಗಿ ವಾಹನದಲ್ಲಿ ಶಾಲಾ ಮಕ್ಕಳ ಬಾಡಿಗೆ ನಡೆಸುತ್ತಿರುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಪಸಾರಿಗೆ ಆಯುಕ್ತ ಜಾನ್ ಮಿಸ್ಕಿತ್ ಮಾತನಾಡಿ ಪ್ರತೀ ಶಾಲೆಯ ವಾಹನಗಳ ಹಾಗೂ ಮಕ್ಕಳ ಸಂಖ್ಯೆ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಲಾಗಿದೆ ಎಂದರು.

ದ.ಕ. ಟ್ರಕ್ ಮಾಲಕರ ಸಂಘದ ಅಧ್ಯಕ್ಷ ಸುನಿಲ್ ಡಿಸೋಜ ಅವರು ಮಾತನಾಡಿ, ನಗರದಲ್ಲಿ ಟ್ರಕ್ ನಿಲ್ಲಲು ಜಾಗವಿಲ್ಲ ಎಂದು ದೂರಿದರು.

ಉಪಸಾರಿಗೆ ಆಯುಕ್ತ ಜಾನ್ ಮಿಸ್ಕಿತ್ ಅವರು ಪ್ರತಿಕ್ರಿಯಿಸಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಶೀಘ್ರ ಜಾರಿಗೆ ಬರಲಿದೆ ಎಂದರು.

ಸಾರ್ವಜನಿಕರು ದೂರು, ಅಹವಾಲು ಇದ್ದಲ್ಲಿ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸಬಹುದು. ಮೇಲ್ ಅಥವಾ ದೂರವಾಣಿ ಮೂಲಕವೂ ದೂರು ನೀಡಬಹುದು ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ ಜಾನ್ ಮಿಸ್ಕಿತ್ ಹೇಳಿದರು. ಹಿರಿಯ ಇನ್‌ಸ್ಪೆಕ್ಟರ್ ರವೀಂದ್ರ ಉಪಸ್ಥಿತರಿದ್ದರು.

"ಮೂರು ತಿಂಗಳಾದರೂ ಡ್ರೈವಿಂಗ್ ಲೈಸೆನ್ಸ್ ಸಿಗುವುದಿಲ್ಲ. ಬಸ್‌ಗಳ ಫುಟ್‌ಬೋರ್ಡ್ ನಿಗದಿತ ಎತ್ತರಕ್ಕೆ ಸೀಮಿತಗೊಳಿಸುವಂತೆ ಆದೇಶವಾಗಿದ್ದರೂ ಪಾಲನೆಯಾಗುತ್ತಿಲ್ಲ. ಕೆಲವೊಂದು ಬಸ್ಸುಗಳಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡುವುದೇ ಇಲ್ಲ. ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಯಾವುದೇ ಅಧ್ಯಕ್ಷರು, ಶಾಸಕರಾಗಲಿ ತಮ್ಮ ಹೆಸರನ್ನು ಹಾಕುವಂತಿಲ್ಲವಾದರೂ ನಿಯಮ ಉಲ್ಲಂಘಿಸಲಾಗುತ್ತಿದೆ".

-ಹನುಮಂತ ಕಾಮತ್, ಸಾಮಾಜಿಕ ಕಾರ್ಯಕರ್ತ.

"ಆರ್‌ಟಿಒ ಕಚೇರಿಯಲ್ಲಿ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರ ಆರಂಭಿಸಬೇಕು. ಶಾಲಾ ವಾಹನದಲ್ಲಿ ಮಿತಿಗಿಂತ ಅಧಿಕ ಮಕ್ಕಳನ್ನು ಕರೆದೊಯ್ಯುತ್ತಿರುವ ಬಗ್ಗೆ ಕ್ರಮ ವಹಿಸಿ".

- ಜಿ.ಕೆ. ಭಟ್, ಸಾಮಾಜಿಕ ಕಾರ್ಯಕರ್ತ

"ಆರ್‌ಟಿಒ ಸಭೆಗೆ ಕಾರ್ಮಿಕ ಸಂಘದ ಪ್ರಮುಖರನ್ನು ಆಹ್ವಾನಿಸಬೇಕು".

ಮೊಹಮ್ಮದ್ ರಫಿ, ಕಾರ್ಯಾಧ್ಯಕ್ಷರು, ಅವಿಭಜಿತ ದ.ಕ. ಜಿಲ್ಲಾ ಬಸ್ ನೌಕರರ ಸಂಘ(ಎಚ್‌ಎಂಎಸ್)

ಮಂಗಳೂರಿಗೆ ಹೊಸ ‘ಎಟಿಸಿ’

ಮಂಗಳೂರಿಗೆ ಹೊಸ ಸ್ವಯಂಚಾಲಿತ ಪರೀಕ್ಷಾ ಸೆಂಟರ್ (ಎಟಿಸಿ)ಅನುಮೋದನೆಗೊಂಡಿದೆ. ಕೆಪಿಟಿ ಸಮೀಪದಲ್ಲಿ ವಾಹನಗಳ ತಪಾಸಣೆಯನ್ನು ಈಗ ಅಧಿಕಾರಿಗಳು ಮಾಡುತ್ತಿದ್ದು, ಮುಂದೆ ಸೂಕ್ತ ಜಾಗವನ್ನು ಗೊತ್ತುಪಡಿಸಿ ಕಂಪ್ಯೂಟರ್ ಆಧಾರಿತವಾಗಿ ಸ್ವಯಂಚಾಲಿತ ಪರೀಕ್ಷಾ ಸೆಂಟರ್ ಕಾರ್ಯನಿರ್ವಹಿಸಲಿದೆ.

- ಜಾನ್ ಮಿಸ್ಕಿತ್, ಉಪ ಸಾರಿಗೆ ಆಯುಕ್ತರು ಹಾಗೂಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ದ.ಕ.

ಕಡಿಮೆಯಾಗದ ಟಿಕೆಟ್‌ನ ‘ಟೋಲ್’ ದರ!

ನಗರದಲ್ಲಿ 68 ನರ್ಮ್ ಬಸ್‌ಗಳಿಗೆ ಅನುಮತಿ ಇದೆ. ಆದರೆ, ಎಲ್ಲಾ ನರ್ಮ್ ಬಸ್‌ಗಳನ್ನು ಓಡಿಸಲಾಗುತ್ತಿಲ್ಲ. ಇದರಿಂದಾಗಿ ಶಕ್ತಿ ಯೋಜನೆ ಮಹಿಳೆಯರಿಗೆ ಲಭ್ಯವಾಗುತ್ತಿಲ್ಲ. ಸುರತ್ಕಲ್ ಟೋಲ್ ದರದ ಕಾರಣದಿಂದ ಎಕ್ಸ್‌ಪ್ರೆಸ್ ಬಸ್‌ಗಳು 5 ರೂ. ಹೆಚ್ಚುವರಿ ದರ ಹಾಕಿದ್ದರು. ಈಗ ಟೋಲ್ ತೆಗೆದರೂ ಟಿಕೆಟ್ ದರ ಕಡಿಮೆ ಆಗಿಲ್ಲ ಎಂದು ಕಾರ್ಮಿಕ ಮುಖಂಡ ಹಾಗೂ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ಷೇಪಿಸಿದರು.

ಸಾರಿಗೆ ಅಧಿಕಾರಿ ಜಾನ್ ಮಿಸ್ಕಿತ್ ಪ್ರತಿಕ್ರಿಯಸಿಇ, ನರ್ಮ್ ಓಡಾಟ ನಡೆಸುತ್ತಿಲ್ಲವಾದರೆ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಟೋಲ್ ದರ ಕೈ ಬಿಡದ ಬಗ್ಗೆ ಪರಿಶೀಲಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News