ಜು.13ರಂದು ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ -7 ಕಾರ್ಯಕ್ರಮದ ಉದ್ಘಾಟನೆ

Update: 2023-07-11 16:25 GMT

ಮಂಗಳೂರು, ಜು.11: ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್ , ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್ ಟೌನ್ ಇವುಗಳ ಸಹಯೋಗದಲ್ಲಿ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ- ಸರಣಿ 7 ಇದರ ಉದ್ಘಾಟನಾ ಕಾರ್ಯಕ್ರಮ ಜು.13ರಂದು ಬೆಳಗ್ಗೆ 9:30ಕ್ಕೆ ಕೊಡಿಯಾಲ್‌ಬೈಲ್‌ನ ಟಿ.ವಿ.ರಮಣ್ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಎನ್ ಅವರು ‘ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ’ಮಾಸಿಕ ಸರಣಿಯ ಒಂದು ವರ್ಷದ ಕಾರ್ಯಕ್ರಮವಾಗಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಕುರಿತು ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಮ್ಮ ಹಿಂದಿನ ಸರಣಿಯಲ್ಲಿ ವಿವಿಧ ಸಮುದಾಯ ಗುಂಪುಗಳನ್ನು ತಲುಪಲು ನಮಗೆ ಸಾಧ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ 10 ಗಂಟೆಯಿಂದ 11:30ರ ವರೆಗೆ ಡಾ.ಮಂಜಮ್ಮ ಜೋಗತಿ ಅವರ ಜೀವನ ಕಥೆ ಆಧಾರಿತ ನಾಟಕ ‘ಮಾತಾ’ ಹಾಗೂ ತೃತೀಯ ಲಿಂಗಿ ಸಮುದಾಯದ ಸಂವಾದ ಆಯೋಜಿಸಲಾಗಿದೆ. ಈ ಸಂದರ್ಭ ಪದ್ಮಶ್ರೀ ಪುರಸ್ಕತ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಇವರಿಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.

ಸಾಮಾನ್ಯ ಸಮುದಾಯವನ್ನು ತೃತೀಯ ಲಿಂಗಿ ಸಮುದಾಯದ ಕಡೆಗೆ ಹೆಚ್ಚು ಒಳಗೊಳ್ಳುವಂತೆ ಮಾಡುವುದು, ತೃತೀಯ ಲಿಂಗಿ ಸಮುದಾಯದ ಮಾನಸಿಕ ಸವಾಲುಗಳ ಕಡೆಗೆ ಕೆಲಸ ಮಾಡುವುದು, ತೃತೀಯ ಲಿಂಗಿ ಸಮುದಾಯದ ಕೊಡುಗೆ ಗುರುತಿಸಿ ಪ್ರಶಂಸಿಸುವುದು ಹಾಗೂ ಈ ಸಮುದಾಯಕ್ಕೆ ಘನತೆ ಮತ್ತು ಗುಣಮಟ್ಟದ ಭರವಸೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ- ಸರಣಿ 7 ಕಾರ್ಯಕ್ರಮವನ್ನು ಸಿಎಸ್‌ಎನ್‌ಎಲ್ ಪ್ರೊಕ್ಯೂರ್ಮೆಂಟ್ ಕಾರ್ಡೋಲೈಟ್‌ನ ಜನರಲ್ ಮ್ಯಾನೇಜರ್(ಎಚ್‌ಆರ್ ಅಡ್ಮಿನ್) ಕದ್ರಿ ದಿವಾಕರ್ ಉದ್ಘಾಟಿಸುವರು. ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ನಿರ್ದೇಶಕಿ ಡಾ.ಶ್ವೇತಾ ಕೆ.ಟಿ., ಮಂಗಳೂರು ರೋಟರಿ ಡೌನ್ ಟೌನ್ ಅಧ್ಯಕ್ಷ ಗಣೇಶ್ ಪ್ರಭು, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಡಾ.ಮಾಲಿನಿ ಎನ್.ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News