ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಳ

Update: 2023-06-28 13:47 GMT

ಉಡುಪಿ, ಜೂ.28: ಕಳೆದೆರಡು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಾನ್ಸೂನ್ ನಿನ್ನೆಯ ಬಳಿಕ ಬಿರುಸು ಪಡೆದುಕೊಂಡಿದೆ. ಇಂದು ಬೆಳಗ್ಗೆಯವರೆಗೆ ಜಿಲ್ಲೆಯಲ್ಲಿ ಸರಾಸರಿ 75.5ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಎಂಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 12.5ಸೆ.ಮೀ.ನಷ್ಟು ಅತೀ ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ತಿಳಿಸಿದೆ. ಕಾಪುವಿನಲ್ಲಿ 11.4ಸೆ.ಮೀ. ಮಳೆಯಾದರೆ, ಕಾರ್ಕಳದಲ್ಲೂ 8ಸೆ.ಮೀ. ಮಳೆ ಸುರಿದಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿಯಲ್ಲಿ 76.3ಮಿ.ಮೀ, ಬ್ರಹ್ಮಾವರದಲ್ಲಿ 76.6, ಕಾಪು 114.3, ಕುಂದಾಪುರ 75.5, ಬೈಂದೂರು 73.6, ಕಾರ್ಕಳ 80.3, ಹೆಬ್ರಿಯಲ್ಲಿ 49.7ಮಿ.ಮೀ. ಮಳೆ ಬಿದ್ದಿದೆ. ಆದರೆ ಜಿಲ್ಲೆಯ ಎಲ್ಲಿಂದಲೂ ಮನೆ ಹಾಗೂ ಸೊತ್ತು ಹಾನಿಯ ವರದಿ ಬಂದಿಲ್ಲ.

ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 29.7 ಡಿಗ್ರಿ ಸೆ. ಆಗಿದ್ದರೆ, ಕನಿಷ್ಠ ಉಷ್ಣಾಂಶ 23.7 ಡಿಗ್ರಿ ಆಗಿತ್ತು. ನಾಳೆ ಜಿಲ್ಲೆಗೆ ಭಾರೀ ಮಳೆಯ ಆರೆಂಜ್ ಅಲರ್ಟ್ ಹಾಗೂ ನಂತರದ ಮೂರು ದಿನಗಳಲ್ಲಿ ಬಿರುಸಿನ ಮಳೆಯ ಎಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಕೆಲವು ಕಡೆಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ದವಾಗಿರಲಿದ್ದು, 3.0ಮೀ.ನಿಂದ 3.2ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News