ಕುಂಜತ್ತಬೈಲ್ ನಲ್ಲಿ ಇಂದಿರಾ ಸೇವಾ ಕೇಂದ್ರ ಲೋಕಾರ್ಪಣೆ

Update: 2023-06-26 18:26 GMT

ಕಾವೂರು: ಕಾಂಗ್ರೆಸ್‌ ನುಡಿದಂತೆ ನಡೆದಿದ್ದು, ಗ್ಯಾರಂಟಿ ನೀಡಲು ಅಸಾಧ್ಯ ಎಂದು ಅಪಪ್ರಚಾರದಲ್ಲಿ ತೊಡಗಿದ್ದ ಬಿಜೆಪಿಗರಿಗೆ ಕಾಂಗ್ರೆಸ್‌ ಸರ್ಕಾರ ತಕ್ಕ ಉತ್ತರ ನೀಡಿದೆ. ಜನರಿಗೆ ಅನೂಕೂಲವಾಗಿರುವ ಎಲ್ಲಾ ಭಾಗ್ಯಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಹೇಳಿದ್ದಾರೆ.

ಅವರು ಕುಂಜತ್ತಬೈಲ್ ನಲ್ಲಿ ನೂತನವಾಗಿ ಆರಂಭಿಸಲಾದ ಇಂದಿರಾ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಸರ್ಕಾರ ಗ್ಯಾರಂಟಿ ನುಡಿದಂತೆ ಈಗಾಗಲೇ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿಯೋಜನೆ ಜಾರಿಗೆ ಬರಲಿದೆ. ಬಡವರಿಗಾಗಿ ನೀಡಲಾಗುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಅಡ್ಡಗಾಲು ಹಾಕುತ್ತಿದೆ. ಇದು ಖಂಡನೀಯ. ಕಾಂಗ್ರೆಸ್ ಸರಕಾರ ಜಾರಿಗೆ ತರಲಿರುವ ಬಡವರ ಪರ ಇರುವ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಬೇಕು ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಪಕ್ಷಕ್ಕಾಗಿ ಪ್ರತಿಯೊಬ್ಬರೂ ದುಡಿಯಬೇಕು. ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಸರಕಾರ ಆಡಳಿತದಲ್ಲಿ ಇರುವಾಗ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನಾಯತ್ ಅಲಿ ಚುನಾವಣೆಯಲ್ಲಿ ಸೋತರೆಂದು ಕ್ಷೇತ್ರವನ್ನು ಬಿಟ್ಟು ಹೋಗಿಲ್ಲ. ವಾರದಲ್ಲಿ ಹೆಚ್ಚಿನ ದಿನಗಳನ್ನು ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಕಳೆಯುತ್ತಿದ್ದಾರೆ. ಇಂತಹ ನಾಯಕರು ಇತರರಿಗೆ ಮಾದರಿ ಎಂದರು.

ವೇದಿಕೆಯಲ್ಲಿ ಸುರತ್ಕಲ್ ಬ್ಲಾಕ್ ನಿಕಟಪೂರ್ವ ಅಧ್ಯಕ್ಷ ಉಮೇಶ್ ದಂಡೆಕೇರಿ, ಮನಪಾ ಮಾಜಿ ಮೇಯರ್ ಹರಿನಾಥ್, ಮನಪಾ ಮಾಜಿ ಉಪಮೇಯರ್ ಕೆ. ಮುಹಮ್ಮದ್, ಮನಪಾ ಸದಸ್ಯ ಅನಿಲ್ ಕುಮಾರ್, ರೆಹಮಾನ್ ಖಾನ್‌ ಕುಂಜತ್ತಬೈಲ್, ಶ್ರೀನಿವಾಸ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News