ಮಂಗಳೂರು ವಿವಿ ಅಂತರ್ ಕಾಲೇಜು ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಆರಂಭ

Update: 2023-06-28 04:12 GMT

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಮತ್ತು ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪುರುಷರಿಗಾಗಿ ನಡೆಯುವ ಪ್ರೊ.ರಿಚಾಡ್ 9 ರೆಬೆಲ್ಲೋ ರೋಲಿಂಗ್ ಟ್ರೋಫಿ, ಮಹಿಳೆಯರಿಗಾಗಿ ನಡೆಯುವ ಶಿರ್ವ ಬ್ಲೋಸಂ ಮನ್ಸಿಯಾನ್ ಸೆಲೆಸ್ಟಿನ್ ಡಿ'ಸೋಜ ಟ್ರೋಫಿಗಾಗಿ ನಡೆಯುವ "ಮಂಗಳೂರು ವಿವಿ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಚಾಂಫಿಯನ್ ಶಿಪ್ 2022-23" ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಮಂಗಳವಾರ ಆರಂಭಗೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಇತರ ಕ್ರೀಡೆಗಳನ್ನು ವೀಕ್ಷಿಸುವಂತೆ ಹೆಚ್ಚಿನ ಕ್ರೀಡಾಭಿಮಾನಿಗಳು ವೇಯ್ಟ್ ಲಿಫ್ಟಿಂಗ್ ಗೆ ಇಲ್ಲದಿರಬಹುದು ಆದರೆ ಈ ಕ್ರೀಡೆಯ ಬಗ್ಗೆ ಆಸಕ್ತಿಯಿರುವ ಅದರದ್ದೇ ಆದ ವರ್ಗವಿದೆ ಎಂದರು. ಮೋಹನ್ ಆಳ್ವರು ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಲ್ಲದೆ, ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ ಎಂದರು.

ರಾಷ್ಟ್ರಮಟ್ಟದ ವೇಯ್ಟ್ ಲಿಫ್ಟರ್, ನಿವೃತ್ತ ಸೈನಿಕ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ ಈಗ ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹ ಸಿಗುತ್ತಿದೆ. ಮಂಗಳೂರು ವಿವಿಯಲ್ಲಿ 194 ಕಾಲೇಜುಗಳಿವೆ ಆದರೆ ಕ್ರೀಡೆಗಳಲ್ಲಿ ಭಾಗವಹಿಸುವ ಕಾಲೇಜುಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವುದು. ಯುವ ಶಕ್ತಿ ಕ್ರೀಡೆಯನ್ನು ಅವಿಭಾಜ್ಯ ಭಾಗವೆಂದು ಪರಿಗಣಿಸಿ ಹೆಚ್ಚೆಚ್ಚು ಭಾಗವಹಿಸಬೇಕು. ಸರಕಾರಗಳು ಕ್ರೀಡಾಪಟುಗಳಿಗೆ ಭದ್ರತೆಯನ್ನು ಒದಗಿಸಬೇಕು ಹಾಗೂ ಉದ್ಯೋಗಕ್ಕೆ ಅವಕಾಶವನ್ನು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಮಂಗಳೂರು ವಿವಿಯ ಹರಿದಾಸ್ ಉಪಸ್ಥಿತರಿದ್ದರು. ಉಪನ್ಯಾಸಕ ಯೊಗೀಶ್ ಕೈರೋಡಿ ಸ್ವಾಗತಿಸಿದರು. ಕ್ರೀಡಾ ತರಬೇತುದಾರ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News