ಹಲಸಿನ ಮೇಳ ಸಂಪನ್ನ: ಆರು ಟನ್ ಹಲಸು ಮಾರಾಟ
ಉಡುಪಿ: ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಹಲಸಿನ ಮೇಳ ರವಿವಾನ ಸಂಪನ್ನಗೊಂಡಿತ್ತು.
ಐದು ದಿನಗಳ ಕಾಲ ನಡೆದ ಮೇಳದಲ್ಲಿ ಒಟ್ಟು ಆರು ಟನ್ ಹಲಸಿನ ಹಣ್ಣು ಹಾಗೂ ಕಾಯಿ ಮಾರಾಟವಾಗಿದೆ. ಅಲ್ಲದೆ ಹಲಸಿನಿಂದ ತಯಾರಿಸಿದ ವಿವಿಧ ಖಾಧ್ಯಗಳಿಗೆ ಮೇಳ ದಲ್ಲಿ ಹೆಚ್ಚಿನ ಬೇಡಿಕೆಗಳು ಇದ್ದವು. ಮೇಳದಲ್ಲಿ ಹಲಸಿನೊಂದಿಗೆ 2 ಟನ್ ಮಾವು, 700ಕೆ.ಜಿ. ರಂಬುಟನ್, 500 ಕೆ.ಜಿ. ನೇರಳೆ ಹಣ್ಣು ಮಾರಾಟ ವಾಗಿದೆ.
ಮೇಳದಲ್ಲಿ ಹೆಚ್ಚಾಗಿ ಹಲಸಿನ ವಿಶೇಷ ತಳಿಗಳಾದ ಚಂದ್ರ, ಸಿದ್ದು ಹಲಸಿನ ಸಸಿಗಳಿಗೆ ವಿಶೇಷ ಬೇಡಿಕೆಗಳು ವ್ಯಕ್ತವಾಗಿದ್ದವು. ಜತೆಗೆ ವರ್ಷದ ಎಲ್ಲ ದಿನಗಳಲ್ಲಿ ಇಳುವರಿ ಕೊಡುವ ಸರ್ವಋತು ಹಲಸು ಮತ್ತು ಮಾವು, ರಂಬುಟನ್ ಸಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಹೀಗೆ ಐದು ದಿನಗಳಲ್ಲಿ ಇಲಾಖೆ ಹಾಗೂ ಖಾಸಗಿ ನರ್ಸರಿಗಳಿಂದ ಸುಮಾರು 16ಸಾವಿರ ಸಸಿ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಹಲಸು, ಹಲಸಿನ ಉತ್ಪನ್ನಗಳನ್ನು ಖರೀದಿಸಿದರು. ವಾರಾಂತ್ಯದ ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದರು.