ಪತ್ರಕರ್ತನ ಮೊಬೈಲ್ ಕಸಿದು ಪುಡಿಗೈದ ಪ್ರಕರಣ: ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

Update: 2023-07-16 16:28 GMT

ಪುತ್ತೂರು: ರಸ್ತೆ ಸುರಕ್ಷತಾ ಕ್ರಮ ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ರಸ್ತೆ ಬದಿಯಲ್ಲಿನ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲ್ ಕಸಿದುಕೊಂಡು ನೆಲಕ್ಕೆ ಬಡಿದು ಹಾನಿಗೊಳಿಸಿದ ಘಟನೆ ಶನಿವಾರ ಸಂಜೆ ಪುತ್ತೂರು ನಗರದ ಹೊರ ವಲಯದ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗುಂಪಕಲ್ಲು ಎಂಬಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ರಸ್ತೆ ಬದಿಯಲ್ಲಿನ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಮೆಸ್ಕಾಂನಿಂದ ಗುತ್ತಿಗೆ ಪಡೆದ ಕಂಟ್ರಾಕ್ಟರ್‌ ದಾರನ ಕಾರ್ಮಿಕರು ಹಾಗೂ ಮೆಸ್ಕಾಂ ಸಿಬ್ಬಂದಿ ಈ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರು ಅಪಾಯಕಾರಿ ರೀತಿಯಲ್ಲಿ ಮರದ ಕೊಂಬೆ ತೆರವು ನಡೆಸುತ್ತಿದ್ದ ಸಿಬ್ಬಂದಿಗಳ ಬಗ್ಗೆ ಮೆಸ್ಕಾಂ ಮೇಲಾಧಿಕಾರಿಗಳಿಗೆ ತಿಳಿಸಿ ಬಳಿಕ ತನ್ನ ಮೊಬೈಲ್‍ನಲ್ಲಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೋರ್ವ ಅವರ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಬಡಿದು ಹಾನಿ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News