ಪತ್ರಕರ್ತರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

Update: 2023-07-08 16:55 GMT

ಉಡುಪಿ, ಜು.8: ನ್ಯೂಸ್ ಯಾವತ್ತೂ ಪತ್ರಕರ್ತನ ವೀವ್ಸ್ ಆಗಬಾರದು. ಪತ್ರಕರ್ತರ ಆಲೋಚನೆಯೇ ನ್ಯೂಸ್ ಆಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿ ನೀಡಬೇಕಾಗಿದೆ. ಸಮಾಜದ ಒಳಿತಿಗಾಗಿ ಹಾಗೂ ಅಭಿವೃದ್ಧಿ ಮತ್ತು ಏಕತೆಯ ಬಲಿಷ್ಠ ಭಾರತಕ್ಕಾಗಿ ಅನಿವಾರ್ಯವಾಗಿದೆ ಎಂದು ಕರ್ನಾಟಕದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಸಮಿತಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಲಾದ ರಾಜ್ಯದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ -2023 ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪತ್ರಕರ್ತರು ಸಕಾರಾತ್ಮವಾಗಿ ಚಿಂತನೆ ಜೊತೆಯಲ್ಲಿ ಸಮಾಜದಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ, ಜೋಡಿಸುವ ಮತ್ತು ವೈಮನಸ್ಸು ಕಡಿಮೆ ಮಾಡುವ ಕಾರ್ಯ ಮಾಡಬೇಕು. ಅಲ್ಲದೆ ಒಗ್ಗಟ್ಟಿನೊಂದಿಗೆ ಏಕತೆ ಸಹೋದರತೆ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಮೂಲಕ ಅಭಿವೃದ್ಧಿಯ ಕರ್ನಾಟಕ ಮತ್ತು ಬಲಿಷ್ಠ ಭಾರತಕ್ಕೆ ವಿಶೇಷ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮವನ್ನು ಎರಡು ಕೈಗಳಿಂದ ಹೊತ್ತ ಸಂವಿಧಾನ ಪುಸ್ತಕವನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಪತ್ರಕರ್ತರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಸಾಮರಸ್ಯ, ಸತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸದಾ ಚಿಂತಿಸುವ ಪತ್ರಕರ್ತರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿಸಬೇಕಾಗಿದೆ. ಪತ್ರಕರ್ತರೂ ಈಗಲೂ ನಿವೇಶನಕ್ಕಾಗಿ ಹಾತೊರೆಯುತ್ತಿದ್ದಾರೆ. ಪತ್ರಕರ್ತರ ಏಳಿಗೆಗಾಗಿ ಸರಕಾರದ ಮಟ್ಟ ದಲ್ಲಿ ಮುಂದೆ ನಿಂತು ಕೆಲಸಕಾರ್ಯ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯ ಪತ್ರಕರ್ತರ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚಿಂದ್ರ ಹಾಕೆ ಮುಖ್ಯ ಅತಿಥಿಗಳಾಗಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿ ಸಿಂಗ್ ಠಾಕೂರು, ಕಾರ್ಯದರ್ಶಿ ಗಳಾದ ಮತ್ತಿಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ಕೋಶಾಧಿಕಾರಿ ವಾಸುದೇವ ಹೊಳ್ಳ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಸ್ವಾಗತಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಜೆ.ಸಿ.ಲೋಕೇಶ್ ಪುರಸ್ಕೃತರ ಪಟ್ಟಿ ವಾಚಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ದಾನಿಗಳ ಪಟ್ಟಿ ವಾಚಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕಲಾಮಯಂ ತಂಡದಿಂದ ಜಾನಪದ ಕಾರ್ಯಕ್ರಮ ನಡೆಯಿತು.

‘ಪತ್ರಕರ್ತರ ವಿವಿಧ ಬೇಡಿಕೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಾನು ಆರೋಗ್ಯ ಸಚಿವನಾಗಿದ್ದಾಗ ಪತ್ರಕರ್ತರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದೆ. ಆದರೆ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ತಿಳಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡಲಾಗುವುದು’

-ಯು.ಟಿ.ಖಾದರ್, ಸಭಾಪತಿ ವಿಧಾನಸಭೆ


 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News