ಕಾರ್ಕಳ: ತೋಡಿಗೆ ಬಿದ್ದು ಮಹಿಳೆ ಮೃತ್ಯು
ಉಡುಪಿ, ಜು.8: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬೇಬಿ ಶೆಟ್ಟಿ (57) ಎಂಬವರು ಶುಕ್ರವಾರ ಮನೆಯ ದನವನ್ನು ಹುಡುಕಿಕೊಂಡು ಹೋದ ವರು ಮನೆಯ ಬಳಿ ಇರುವ ತುಂಬಿ ಹರಿಯುತಿದ್ದ ತೋಡಿಗೆ ಅಕಸ್ಮಿಕವಾಗಿ ಬಿದ್ದು, ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಈ ಬಾರಿ ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದೆ. ನಲ್ಲೂರು ಗ್ರಾಮದ ನಡಾಯಿಪಲ್ಕದ ಜಗನ್ನಾಥ ಶೆಟ್ಟಿ ಎಂಬವರ ಪತ್ನಿಯಾದ ಬೇಬಿ ಶೆಟ್ಟಿ ಇವರು ಶುಕ್ರವಾರ ಅಪರಾಹ್ನ 3ಗಂಟೆ ಸುಮಾರಿಗೆ ದನವನ್ನು ಹುಡುಕಿಕೊಂಡು ಮನೆಯ ಪಕ್ಕದಲ್ಲೇ ಇರುವ ಹಾಡಿಗೆ ಹೋದವರು ಭಾರೀ ಮಳೆಯಿಂದ ತುಂಬಿ ಹರಿಯುತಿದ್ದ ಕೇರಾ ಹೊಳೆಗೆ ಅಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತಪಟ್ಟಿದ್ದಾರೆ.
ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಹೊಸದಾಗಿ 11 ಮನೆಗಳಿಗೆ ಹಾನಿಯುಂಟಾಗಿರುವ ವರದಿಗಳು ಬಂದಿವೆ. ಉಡುಪಿ, ಕಾರ್ಕಳ ಹಾಗೂ ಬೈಂದೂರು ತಾಲೂಕುಗಳಲ್ಲಿ ತಲಾ ಎರಡು, ಬ್ರಹ್ಮಾವರ ತಾಲೂಕಿನಲ್ಲಿ ನಾಲ್ಕು ಹಾಗೂ ಕಾಪು ತಾಲೂಕಿನಲ್ಲಿ ಒಂದು ಮನೆ ಗಾಳಿ-ಮಳೆಯಿಂದ ಹಾನಿಗೊಳ ಗಾಗಿವೆ. ಇದರಿಂದ ಸುಮಾರು ಎರಡು ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಇದರೊಂದಿಗೆ ಬಹ್ಮಾವರ ತಾಲೂಕಿನ ವಡ್ಡರ್ಸೆಯ ನಾಗರತ್ನ ಹಾಗೂ ವಾರಂಬಳ್ಳಿ ಗ್ರಾಮದ ಅಮ್ಮಣ್ಣಿ ಪೂಜಾರ್ತಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದ್ದು ತಲಾ 20,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ ಮುಕ್ತಾಯಗೊಂಡಂತೆ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಸರಾಸರಿ 51.5ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 46.8ಮಿ.ಮೀ., ಬ್ರಹ್ಮಾವರದಲ್ಲಿ 43.2, ಕಾಪು 43.7, ಕುಂದಾಪುರ 49.4, ಬೈಂದೂರು 82.5, ಕಾರ್ಕಳದಲ್ಲಿ 38.5 ಹಾಗೂ ಹೆಬ್ರಿಯಲ್ಲಿ 51.4ಮಿ.ಮೀ. ಮಳೆಯಾಗಿದೆ.
ಹವಾಮಾನ ಇಲಾಖೆ ನಾಳೆಗೆ ಯೆಲ್ಲೋ ಅಲರ್ಟ್‌ನ್ನು ಘೋಷಿಸಿದೆ. ಅನಂತರದ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.