ಕೇಂದ್ರೀಯ ವಿದ್ಯಾಲಯ ಕ್ರೀಡಾಕೂಟ: ಉಡುಪಿ ಜಿಲ್ಲಾ ತಂಡಕ್ಕೆ ಪ್ರಥಮ ಸ್ಥಾನ
ಉಡುಪಿ, ಜು.15: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 52ನೇ ಕೇಂದ್ರೀಯ ವಿದ್ಯಾಲಯದ ಬೆಂಗಳೂರು ಪ್ರಾಂತದ ಕ್ರೀಡಾಕೂಟದಲ್ಲಿ ಉಡುಪಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಉಡುಪಿ ಜಿಲ್ಲೆಯು ಕ್ರೀಡಾಕೂಟದಲ್ಲಿ ಅತೀ ಹೆಚ್ಚಿನ ಪದಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದೆ.
ಉಡುಪಿ ಕೇಂದ್ರೀಯ ವಿದ್ಯಾಲಯದ ಒಟ್ಟು 54 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಅಥ್ಲೆಟಿಕ್ಸ್ ವಿಭಾಗದಲ್ಲಿ 20 ವಿದ್ಯಾರ್ಥಿ ಗಳು ಭಾಗ ವಹಿಸಿ 8 ಚಿನ್ನ, 9 ಬೆಳ್ಳಿ ಮತ್ತು 5 ಕಂಚಿನ ಪದಕ ಪಡೆದಿದ್ದಾರೆ. ಈಜು ಸ್ಪರ್ಧೆಯಲ್ಲಿ 1 ಚಿನ್ನ ಮತ್ತು 1 ಬೆಳ್ಳಿ ಹಾಗೂ ಚೆಸ್‌ನಲ್ಲಿ 2 ಬೆಳ್ಳಿ ಪದಕ ಸೇರಿದಂತೆ ಒಟ್ಟು 26 ಪದಕಗಳನ್ನು ಗೆದ್ದು ಕ್ರೀಡಾಕೂಟದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಅನುರಾಗ್ (ಡಿಸ್ಕಸ್ ಥ್ರೋ), ಪ್ರಾಪ್ತಿ ಶೆಟ್ಟಿ (100 ಮೀ. ಓಟ ಮತ್ತು ಉದ್ದ ಜಿಗಿತ) ಶ್ ಹರೀಶ್ ಕೋಟ್ಯಾನ್ (100 ಮೀ, 200 ಮೀ ಓಟ ಮತ್ತು ಉದ್ದ ಜಿಗಿತ) ಸಮೀಕ್ಷಾ (ಎತ್ತರ ಜಿಗಿತ) ಶೌರ್ಯ (200 ಮೀ.ಓಟ) ಭಾಗದಲ್ಲಿ , ಚೆಸ್ ಪಂದ್ಯದಲ್ಲಿ ಮಾಹಿನ್ ಕೆ ಮತ್ತು ಮಾನಸಿ ಕೆ ಹಾಗೂ ಈಜು ಸ್ಪರ್ಧೆಯಲ್ಲಿ ಅನುಜ್ಞಾ ರಾಣೆ ಸೇರಿದಂತೆ ಒಟ್ಟು 8 ಮಂದಿ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ, ಪದಕ ಪಡೆದ ಹಾಗೂ ಭಾಗವಹಿಸಿಸದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ತರಬೇತುದಾರ ರಾದ ಸಂಗಮೇಶ್ ಅವರಿಗೆ ಉಡುಪಿ ಕೇಂದ್ರೀಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಕೆ.ಶಶಿ ಮೋಹನ್ ಅಭಿನಂದನೆ ಸಲ್ಲಿಸಿದ್ದಾರೆ.