ಕೇರಳ ಮೂಲದ ಉದ್ಯಮಿಯ ಹನಿಟ್ರ್ಯಾಪ್ ಪ್ರಕರಣ: ಯುವತಿ ಸಹಿತ ಎಂಟು ಮಂದಿ ಸೆರೆ

Update: 2023-06-28 13:24 GMT

ಮಂಗಳೂರು: ಕೇರಳ ಮೂಲದ ಉದ್ಯಮಿಯನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸಹಿತ ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಮೂಡುಬಿದಿರೆ ಮೂಲದ ಯುವತಿ ಮತ್ತು ಬೋಂದೆಲ್‌ನ ಪ್ರೀತಮ್, ಮೂಡುಶೆಡ್ಡೆ ಪರಿಸರದ ಕಿಶೋರ್, ಮುರಳಿ, ಸುಶಾಂತ್, ಅಭಿ ಎಂದು ಗುರುತಿಸಲಾಗಿದೆ.

ಕೇರಳ ಮೂಲದ ಉದ್ಯಮಿ ಮೊಯ್ದಿನ್ ಕುಂಞಿ ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆ ಮೂಲದ ಯುವತಿಯೊಂದಿಗೆ ಫೆಬ್ರವರಿ 16ರಂದು ವಾಮಂಜೂರು ಸಮೀಪದ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್‌ವೊಂದಕ್ಕೆ ತೆರಳಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಅವರು ರೆಸಾರ್ಟ್‌ನಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಏಕಾಏಕಿ ಪ್ರವೇಶಿಸಿ  ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದು ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಹೇಳಲಾಗಿದೆ.

ಉದ್ಯಮಿಯು ತನ್ನಲ್ಲಿದ್ದ ಹಣ ನೀಡಿ ಅಲ್ಲಿಂದ ಪಾರಾಗಿ ಬಂದಿದ್ದರೂ ಕೂಡ ಕರೆ ಮಾಡಿ ಮತ್ತೆ ಹಣಕ್ಕಾಗಿ ಪೀಡಿಸಿದ್ದಾರೆ. ಕಳೆದ ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡ ಮೊಯ್ದಿನ್ ಕುಂಞಿ ಹನಿಟ್ರ್ಯಾಪ್ ತಂಡದ ಒತ್ತಡ ತಾಳಲಾರದೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News