ಇಂದು ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಹುಟ್ಟುತ್ತಿಲ್ಲ: ಪ್ರೊ.ನಾವಡ
ಉಡುಪಿ, ಜು.1: ಇಂದು ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಹುಟ್ಟುತ್ತಿಲ್ಲ, ಜ್ಞಾನವು ಸ್ಫೋಟಗೊಳ್ಳುವುದು ವಿವಿಗಳಲ್ಲಿ ಅಲ್ಲ. ಅದು ಹುಟ್ಟುವುದು ಹಿರಿಯ ಪಂಡಿತರಲ್ಲಿ. ಇಂಥ ಸಾಕಷ್ಟು ಪಂಡಿತ ಪರಂಪರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಕನ್ನಡದ ಹಿರಿಯ ವಿದ್ವಾಂಸ, ಭಾಷಾಶಾಸ್ತ್ರಜ್ಞ ಹಾಗೂ ಸಂಶೋಧಕ ಪ್ರೊ.ಎ.ವಿ.ನಾವಡ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 2023ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಇದೇ ಸಮಾರಂಭದಲ್ಲಿ ಮಂಗಳೂರಿನ ನಿಟ್ಟೆ ಪರಿಗಣಿತ ವಿವಿಯ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾಗಿರುವ ಭಾಷಾ ಉಪನ್ಯಾಸಕಿ ಹಾಗೂ ಜಾನಪದ ಸಂಶೋಧಕಿ ಡಾ.ಸಾಯಿಗೀತಾ ಅವರಿಗೆ 2023ನೇ ಸಾಲಿನ ಡಾ.ಯು.ಪಿ.ಉಪಾಧ್ಯಾಯ- ಡಾ.ಸುಶೀಲಾ ಪಿ.ಉಪಾಧ್ಯಾಯ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು, ಮುಳಿಯ, ಕಡಂಗೋಡ್ಲು, ಕುಕ್ಕಿಲ ಮುಂತಾದ ಪಂಡಿತ ಪರಂಪರೆಯೇ ಇದ್ದು, ಇವರ ವಿದ್ವತ್‌ನ ಪರಿಚಯ ಈಗಲೂ ನಾಡಿನ ಉಳಿದ ವಿವಿಗಳಲ್ಲಿ ಕೆಲಸ ಮಾಡುವ ವಿದ್ವಾಂಸರಿಗಿಲ್ಲ. ಇಂದಿನ ವಿವಿ ವಿದ್ವಾಂಸರ ವಿದ್ವತ್‌ಗಳೆಲ್ಲಾ ಪಶ್ಚಿಮ ಪ್ರೇರಿತ ಜ್ಞಾನಗಳಾಗಿವೆ ಎಂದು ಪ್ರೊ.ನಾವಡ ನುಡಿದರು.
ಸೇಡಿಯಾಪುರಂಥ ಪಂಡಿತರು ಶಬ್ದಗಳ ಮೂಲಕ ಹೊಸ ಅರಿವಿನ ಬಾಗಿಲು ತೆರೆಯುತ್ತಾರೆ. ಆದರೆ ಪಶ್ಚಿಮ ಜ್ಞಾನ ಒಲೈಸುವ ದೃಷ್ಟಿಕೋನದಿಂದ ನಮ್ಮ ಪಂಡಿತ ಪರಂಪರೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ತಮ್ಮ ಕನ್ನಡ-ಸಂಸ್ಕೃತದ ಜ್ಞಾನದ ಮೂಲಕ ಸೇಡಿಯಾಪು, ಗೋವಿಂದ ಪೈಗಳಂಥ ಪಂಡಿತರು ಈ ಭಾಗದಲ್ಲಿ ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆ ದೊಡ್ಡದು. ಇದರೊಂದಿಗೆ ಅವರು ಒಂದು ಯುವ ತಲೆಮಾರಿಗೇ ಪ್ರೇರಕ ಶಕ್ತಿಯಾಗಿದ್ದರು. ದಕ್ಷಿಣ ಕನ್ನಡದಲ್ಲಿ ಕನ್ನಡವನ್ನು ಉಳಿಸುವ ಕೆಲಸ ವನ್ನು ಮಾಡಿದ್ದರು ಎಂದರು.
ಡಾ.ಸಾಯಿಗೀತಾ ಅವರೂ ಮಾತನಾಡಿ ತುಳು ನಿಘಂಟು ತಂಡ ಉಪಾದ್ಯಾಯ ದಂಪತಿಗಳ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ನರಸಿಂಹ ಮೂರ್ತಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂಧಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ‘ಕನ್ನಡ ಕಾವ್ಯ ಮೀಮಾಂಸೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ರಾದ ಡಾ.ದೇವಿದಾಸ ಎಸ್. ನಾಯ್ಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಸೇಡಿಯಾಪು ಅವರ ಪುತ್ರ ಡಾ.ಜಯರಾಮ ಭಟ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಕಾರ್ಯದರ್ಶಿ ವರದರಾಯ ಪೈ ಪ್ರೊ.ನಾವಡರಿಗೆ ಸೇಡಿಯಾಪು ಹಾಗೂ ಡಾ.ಸಾಯಿಗೀತಾ ಅವರಿಗೆ ಉಪಾಧ್ಯಾಯ ದಂಪತಿ ಪ್ರಶಸ್ತಿ ನೀಡಿ ಗೌರವಿಸಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಕಾರ್ಯಕ್ರಮ ನಿರೂಪಿಸಿದ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ವಂದಿಸಿದರು.
ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ನಮ್ಮ ಇಂದಿನ ಕನ್ನಡ ಅಧ್ಯಾಪಕರು, ವಿವಿಗಳ ಪ್ರಾದ್ಯಾಪಕರು ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿಲ್ಲ. ತಮ್ಮ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸುವ ಕೆಲಸವೂ ಇವರಿಂದ ಆಗುತ್ತಿಲ್ಲ ಎಂದು ವಿಷಾಧಿಸಿದ ಡಾ.ನಾವಡ ಸೇಡಿಯಾಪು ಅವರ ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ! ಬತ್ತಿಯೊಣಗುತ್ತಿದೆ, ಬೆಳಕು ಬಾಡುತ್ತಿದೆ, ಕತ್ತಲೆ ಮುಂದೆ ಮುಂದೊತ್ತುತ್ತಿದೆ...’ ಎಂಬ ಪ್ರಸಿದ್ಧ ಕವನವನ್ನು ಇಂದಿನ ಅಧ್ಯಾಪಕರು ಅನುಸರಿಸಬೇಕಿದೆ ಎಂದು ಕಿವಿಮಾತು ಹೇಳಿದರು.