ಕೊಣಾಜೆ: ಬಾರ್ ತೆರವಿಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಾಳೆಪುಣಿ ಪಂಚಾಯತ್‌ಗೆ ಮುತ್ತಿಗೆ
ಕೊಣಾಜೆ: ಶಾಲಾ ಆವರಣದ ಬಳಿ ನಿರ್ಮಾಣಗೊಂಡಿರುವ ಬಾರ್ ಆ್ಯಂಡ್ ರೆಸ್ಟೋರೆಂಟನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಬುಧವಾರ ಬಾಳೆಪುಣಿ ಪಂಚಾಯತಿಗೆ ಮುತ್ತಿಗೆ ಹಾಕಿ ಗ್ರಾಂ.ಪಂ.ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಭಟ್ ಅವರು ಮಾತನಾಡಿ, ಶಾಲೆಯ ಬಳಿ ನೂತನವಾಗಿ ಆರಂಭಗೊಂಡ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರವು ಆಗುವವರೆಗೂ ಪ್ರಜಾಪ್ರಭುತ್ವ ರೀತಿಯಲ್ಲಿ ಅಮರಣಾಂತ ಸತ್ಯಾಗ್ರಹದಂತಹ ಹೋರಾಟ ನಡೆಸಲು ಶಾಲಾಡಳಿತ ಮಂಡಳಿ ಸಿದ್ಧವಿದೆ ಎಂದು ಹೇಳಿದರು.
ಸರಕಾರದ ಮಾರ್ಗದರ್ಶನವನ್ನು ಪಾಲಿಸದೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಅನುಮತಿ ನೀಡಲಾಗಿದೆ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಪುಣ್ಯಕೋಟಿನಗರದ ಗೋಶಾಲೆ ಹಾಗೂ ಶಾಲೆಯ ಬಳಿ ಬಾರ್ ತೆರೆಯಲು ಉದ್ದೇಶಿಸಿರುವುದು ಕಾನೂನು ವಿರೋಧಿಯಾಗಿದೆ. ಶಾಲೆಯ ಆವರಣದ 100 ಮೀ ಅಂತರದಲ್ಲಿ ಯಾವುದೇ ಅಮಲು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಅದನ್ನು ಕಡೆಗಣಿಸಿ ತರಾತುರಿಯಲ್ಲಿ ಸಾರ್ವಜನಿಕ ಆಕ್ಷೇಪ ತೆಗೆದುಕೊಳ್ಳದೇ ಆರಂಭಿಸಲಾಗಿದೆ. ಶಾಲೆಯ ವಿದ್ಯಾ ಚಟುವಟಿಕೆಗಳಿಗೆ, ಶಾಲಾ ವಿದ್ಯಾರ್ಥಿನಿಯರು ಸಂಜೆ ಮನೆಗೆ ತೆರಳುವಾಗ ತೊಂದರೆ ಯಾಗಲಿದೆ. ಕೊಟ್ಟಿರುವ ಲೈಸೆನ್ಸ್ ರದ್ದುಮಾಡಬೇಕು ಎಂದು ಪಂ.ಗೆ ಕೇಳಿಕೊಳ್ಳುತ್ತಿದ್ದೇವೆ. ಮನವಿ ತಿರಸ್ಕಾರವಾದಲ್ಲಿ ಮೇಲ್ಮನವಿ, ಮಂತ್ರಿಗಳ ಭೇಟಿ, ಇಲಾಖೆಗಳ ಭೇಟಿ, ಸತ್ಯಾಗ್ರಹ, ಅನ್ನಸತ್ಯಾಗ್ರಹ, ನಿರಶನ ಸತ್ಯಾಗ್ರಹ ಸೇರಿದಂತೆ ಅಮರಣಾಂತ ಉಪವಾಸ ಕೈಗೊಳ್ಳಲು ಸಿದ್ಧರಿದ್ದೇವೆ. ಸಾಮಾನ್ಯ ಸಭೆಯಲ್ಲಿ ಇಟ್ಟು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಅನ್ನುವ ಅಭಿಪ್ರಾಯ ಬಾಳೆಪುಣಿ ಗ್ರಾ. ಪಂ ಆಡಳಿತ ನೀಡಿದೆ. ಶಾಲೆಗೆ ಮೂರು ದ್ವಾರಗಳಿವೆ, ಹೂಹಾಕುವಕಲ್ಲು, ಉತ್ತರ ಧಿಕ್ಕಿನಲ್ಲಿ , ಪಶ್ಚಿಮ ಭಾಗದಲ್ಲಿ ಬಸ್ಸುಗಳು ಹೋಗುವ ದಾರಿಯಿದೆ. ಉತ್ತರ ಧಿಕ್ಕಿನ ದ್ವಾರದಿಂದ ಕೇವಲ 50 ಮೀ. ದೂರದಲ್ಲಿ ಬಾರ್ ಸ್ಥಾಪನೆಯಾಗಿದೆ. ಇವೆಲ್ಲವೂ ಕಾನೂನು ವಿರೋಧಿಯಾಗಿದ್ದು, ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಲಾ ವಿದ್ಯಾರ್ಥಿನಿ ರಶ್ಮಿತ ಮಾತನಾಡಿ ಶಾಲೆಯ ಆವರಣದ ಬಳಿ ಬಾರ್ ಸೇರಿದಂತೆ, ಮಾದಕ ವಸ್ತುಗಳ ಮಾರಾಟ ಕಾನೂನು ಪ್ರಕಾರ ನಿಷೇಧವಿದ್ದರೂ ಬಾರ್ ಆರಂಬಿಸಲು ಅನುಮತಿ ನೀಡುವ ಮೂಲಕ ಕಾನೂನು ಉಲ್ಲಂಘನೆಯಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಶಾಲೆಯ ಪರವಾಗಿ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿಯಿಂದ ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಝರೀನಾ ಆವರಿಗೆ ಮನವಿ ಸಲ್ಲಿಸಿದರು.