ಗ್ರಾಮ ಪಂಚಾಯತ್ ಸದಸ್ಯರ ಅನರ್ಹತೆ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

Update: 2023-07-11 15:32 GMT

ಉಡುಪಿ, ಜು.11: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾದ 3 ತಿಂಗಳ ಒಳಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದರೆ ಸದಸ್ಯತ್ವ ಅನರ್ಹಗೊಳಿಸಲಾಗುವುದು ಎಂದು ಉಚ್ಛ ನ್ಯಾಯಾಲಯ ಮತ್ತು ಸರಕಾರ ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನಲ್ಲಿ ಈ ಬಗ್ಗೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಸದನದ ಗಮನ ಸೆಳೆದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಸಚಿವ ಕೋಟ, ಗ್ರಾಮ ಪಂಚಾಯತಿಯ ಸದಸ್ಯರಲ್ಲಿ ಶೇ.50ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದಿಂದ ಬಂದವರಿದ್ದಾರೆ. ಅವರನ್ನು ಇಂತಹ ಒಂದು ವಿಚಾರಕ್ಕೆ ಕೂಡಲೇ ಅವರ ಸದಸ್ಯ ಸ್ಥಾನದಿಂದ ತೆಗೆದು ಹಾಕಬಾರದು ಎಂದು ಸದನದ ಗಮನ ಸೆಳೆದರು.

ಅಲ್ಲದೇ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993 ಪ್ರಕರಣ 43-ಬಿ ಯಲ್ಲಿ ತಿಳಿಸಿದಂತೆ, ಗ್ರಾಮ ಪಂಚಾಯತ್ ಸದಸ್ಯರ ಚರ ಮತ್ತು ಸ್ಥಿರ ಆಸ್ತಿ 2 ಲಕ್ಷವನ್ನು ಮೀರಿದರೆ ಮಾತ್ರ ಅನ್ವಯವಾಗುತ್ತದೆ. ಅಲ್ಲದೇ, ಪ್ರತಿ ಆರ್ಥಿಕ ವರ್ಷದ ಮೇ ತಿಂಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವ ಸದಸ್ಯ ಆಸ್ತಿ ಘೋಷಣೆಯನ್ನು ಮಾಡಿಲ್ಲವೋ ಆ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು ಚುನಾವಣಾ ಆಯುಕ್ತರು ಗ್ರಾಮ ಪಂಚಾಯತ್ ಸದಸ್ಯರಿಗೆ ಅವರ ಅಹವಾಲನ್ನು ಹೇಳಿಕೊಂಡ ನಂತರ ಕಾರಣಗಳಿದ್ದರೆ ಮಾತ್ರ ಗ್ರಾಮ ಪಂಚಾಯತ್ ಸದಸ್ಯನನ್ನು ಆಸ್ತಿ ಘೋಷಣೆ ಮಾಡಿಲ್ಲವೆಂದು ತೆಗೆದು ಹಾಕಬಹುದು ಅಲ್ಲದೇ, ಸುಖಸುಮ್ಮನೆ ಕಾರಣಗಳಿಲ್ಲದೇ 3 ತಿಂಗಳೊಳಗೆ ಆಸ್ತಿ ಘೋಷಣೆ ಮಾಡಿಲ್ಲವೆಂಬ ಅಭಿಪ್ರಾಯದ ಮೇಲೆ ಅವರನ್ನು ಸದಸ್ಯರ ಸ್ಥಾನದಿಂದ ಅನರ್ಹತೆ ಮಾಡುವುದು ಕಾಯಿದೆಯ ಉಲ್ಲಂಘನೆ ಯಾಗುತ್ತದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News