ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರಕ್ಕೆ ಹೈದರಾಬಾದಿನ ಕುಚಿಪುಡಿ ನೃತ್ಯ ತಂಡ ಭೇಟಿ
ಉಡುಪಿ, ಜು.೧೦: ಪಾರಂಪರಿಕ ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಗೆ ಯಕ್ಷಗಾನ ಕೇಂದ್ರ ಇಂದ್ರಾಳಿ ಮಹತ್ವದ ಕೊಡುಗೆ ನೀಡಿದೆ. ಯಕ್ಷಗಾನದ ಕುರಿತು ಅಧ್ಯಯನ ಮಾಡುವವರಿಗೆ ಅದು ಸಂಪನ್ಮೂಲ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಮಾಹೆ, ಈ ಕೇಂದ್ರವನ್ನು ಇನ್ನೂ ಹೆಚ್ಚಿನ ಸಾಧನೆಗೆ ಅಣಿಗೊಳಿಸಲು ಶ್ರಮವಹಿಸುತ್ತಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.
ಯಕ್ಷಗಾನ ಕೇಂದ್ರಕ್ಕೆ ರವಿವಾರ ಹೈದರಾಬಾದಿನ ನೃತ್ಯಾಂಜಲಿ ಕಲ್ಚರಲ್ ಈವೆಂಟ್ ಆರ್ಗನೈಸೇಶನ್‌ನ ಸ್ಥಾಪಕ ಅಧ್ಯಕ್ಷೆ ಹಾಗೂ ಕುಚಿಪುಡಿ ನೃತ್ಯಗುರು ಡಾ. ಶ್ರೀದೇವಿ ಮತ್ತವರ ತಂಡ ಅಧ್ಯಯನಕ್ಕಾಗಿ ಭೇಟಿ ನೀಡಿದ ಸಂದರ್ಭ ದಲ್ಲಿ ಶುಭ ಹಾರೈಸಿ ಅವರು ಮಾತನಾಡುತಿದ್ದರು.
ಹೈದರಾಬಾದಿನ ತಂಡ ಯಕ್ಷಗಾನ ಮತ್ತು ಕುಚಿಪುಡಿ ನೃತ್ಯ ಇವುಗಳ ನಡುವಿನ ಸಾಮ್ಯತೆ ಹಾಗೂ ವ್ಯತ್ಯಾಸದ ಕುರಿತು ಅಧ್ಯಯನ ನಡೆಸಿದೆ. ಯಕ್ಷಗಾನದ ಇತಿಹಾಸ ಹಾಗೂ ಪ್ರಾಮುಖ್ಯತೆ ಬಗ್ಗೆ ಪ್ರೊ.ಎಂ.ಎಲ್. ಸಾಮಗ ಅವರು ವಿವರಣೆ ನೀಡಿದರು. ಡಾ. ಶ್ರೀದೇವಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಸಭೆಯಲ್ಲಿ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ, ಸಲಹಾ ಸಮಿತಿಯ ಸದಸ್ಯರು, ಕೇಂದ್ರದ ಆಡಳಿತಾಧಿಕಾರಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕೇಂದ್ರದ ಗುರುಗಳು, ವಿದ್ಯಾರ್ಥಿಗಳು ಹಾಗೂ ಯಕ್ಷರಂಗದ ಸದಸ್ಯರಿಂದ ಪ್ರಾತ್ಯಕ್ಷಿಕೆ ನಡೆಯಿತು.