ಕುಂದಾಪುರ: ಮಾರಾಟಕ್ಕೆ ತಂದಿದ್ದ 22.56ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಸ್ನೇಹಿತ!

Update: 2023-06-27 16:02 GMT

ಕುಂದಾಪುರ, ಜೂ.27: ಮಾರಾಟಕ್ಕಾಗಿ ತಂದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜೊತೆಗಿದ್ದ ಸ್ನೇಹಿತನೇ ಕದ್ದು ಪರಾರಿಯಾಗಿದ್ದಾನೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಹಮ್ಮದ್ ಶಾಹಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮೆಂಡ್ ಎಂಬ ಜ್ಯುವೆಲ್ಲರಿ ಹೋಲ್ ಸೇಲ್ಸ್ ಮಾರಾಟ ಅಂಗಡಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ಪ್ರಸ್ತುತ ಮಂಗಳೂರು ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ರಮೇಶ್ ಕುಮಾರ್(26) ಎಂಬವರು ಜೂ.10ರಂದು 421.380 ಮಿಲಿ ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಹೊರಟಿದ್ದು, ಇವರಿಗೆ ಅವರ ಸ್ನೇಹಿತ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬಾತ ಮಂಗಳೂರಿನ ಪಂಪ್ವೇಲ್ ಬಳಿ ಸಿಕ್ಕಿದ್ದನು.

ಇವರಿಬ್ಬರು ಬಸ್‌ನಲ್ಲಿ ಹೊರಟು ಸಂಜೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ 14 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ 14 ಗಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ವಾಪಸು ಮಂಗಳೂರಿಗೆ ಹೊರಟಿದ್ದರು. ಕುಂದಾಪುರ ತಲುಪುವಾಗ ಸಂಜೆ 7 ಆಗಿರುವುದರಿಂದ ಇವರಿಬ್ಬರು ಕುಂದಾ ಪುರದ  ಹೊಟೇಲ್‌ನಲ್ಲಿ ರೂಮ್ ಮಾಡಿ ಉಳಿದುಕೊಂಡಿದ್ದರು.

ರಾತ್ರಿ 10:30ರ ಸುಮಾರಿಗೆ ರಮೇಶ್ ಕುಮಾರ್ ಮಲಗುವ ಮಂಚದ ನಡುವೆ ಚಿನ್ನಾಭರಣ ಇರುವ ಬ್ಯಾಗ್ ಇಟ್ಟು ಮಲಗಿದ್ದು, ಜೂ.11ರಂದು ಬೆಳಗ್ಗಿನ ಜಾವ 3 ಗಂಟೆಗೆ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ರೂಮ್‌ನಲ್ಲಿ ಇರಲಿಲ್ಲ. ಅಲ್ಲದೆ ಚಿನ್ನಾಭರಣ ಇದ್ದ ಬ್ಯಾಗ್ ಕೂಡ ಕಳವಾಗಿ ರುವುದು ಕಂಡುಬಂತು. ನಂತರ ರೂಮ್‌ನ ಬಾಗಿಲನ್ನು ತೆರೆಯಲು ಹೋದಾಗ ಹೊರಗಿನಿಂದ ಚಿಲಕ ಹಾಕಿತ್ತು ಎನ್ನಲಾಗಿದೆ.

ರಾಮ್ ಬ್ಯಾಗಿನಲ್ಲಿಟ್ಟಿದ್ದ 43 ಜೊತೆ ಚಿನ್ನದ ಸಾನಿಯಾ ಬಾಲಿ, 153 ಫೀಸ್ ಚಿನ್ನದ ಮೂಗುತಿ, 44 ಫೀಸ್ ಚಿನ್ನದ ಜೆ ಬಾಲಿ, 158 ಜೊತೆ ಚಿನ್ನದ ಕಿವಿ ಯೋಲೆ, 60 ಜೊತೆ ಕಿವಿಯ ಚಿನ್ನದ ಟಾಪ್ಸ್, 14 ಗ್ರಾಂ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News