ಕುಂದಾಪುರ: ಶಾಸಕ ಕಿರಣ್ ಕೊಡ್ಗಿ ನೂತನ ಕಚೇರಿ ಉದ್ಘಾಟನೆ
ಕುಂದಾಪುರ, ಜೂ.30: ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧವಿಲ್ಲದೆ ಕೆಲಸ ಮಾಡುವ ಸಾಮರ್ಥ್ಯ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಗಿದೆ ಎಂದು ಮಾಜಿ ಶಾಸಕ, ಬಸ್ರೂರು ಶ್ರೀಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್‌ನಲ್ಲಿ ಶುಕ್ರವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ನೂತನ ಶಾಸಕರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಅಭಿವೃದ್ಧಿ ಕಾರ್ಯ ತಲುಪಬೇಕು. ಪಕ್ಷ ಸಂಘಟನೆಗೂ ಒತ್ತು ನೀಡಬೇಕು ಎಂದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂದಾಪುರ ಹೃದಯ ಭಾಗ ಶಾಸ್ತ್ರೀ ವೃತ್ತದಲ್ಲಿ ಶಾಸಕರ ಕಚೇರಿ ಉದ್ಘಾಟನೆಗೊಂಡಿದ್ದು ಕ್ಷೇತ್ರದ ಜನರಿಗೆ ಇಲ್ಲಿ ಭೇಟಿ ನೀಡಿ ಅಹವಾಲು ನೀಡಲು ಸುಲಭವಾಗುತ್ತದೆ. ಶಾಸಕರ ಕಚೇರಿಯ ಮೂಲಕ ಜನರ ಕಡತಗಳ ಸುಲಭ ವಿಲೇವಾರಿಯಾಗಿ ಸರಕಾರಿ ಕೆಲಸಗಳು ಶೀಘ್ರವಾಗಿ ನಡೆಯಬೇಕು. ಇದೊಂದು ಅಭಿವೃದ್ಧಿ ಕೇಂದ್ರವಾಗಿ ಸಾಮಾನ್ಯ ಜನರ ಕಾರ್ಯಾಲಯವಾಗಲಿ ಎಂದು ಆಶಿಸಿದರು.
ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ಇದು ಸರಕಾರಿ ಕಚೇರಿ ಯಾಗಿದ್ದು ಜನ ಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಶೀಘ್ರವಾಗಿ ಪೂರೈಸಲು ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಶನಿವಾರ ನಾನು ಜನರಿಗೆ ಲಭ್ಯವಿರುತ್ತೇನೆ. ಉಳಿದ ದಿನಗಳಲ್ಲಿ ಆಪ್ತ ಸಹಾಯಕರು ಕಚೇರಿಯಲ್ಲಿದ್ದು ಜನರಿಗೆ ಸ್ಪಂದನೆ ನೀಡಲಿದ್ದಾರೆ ಎಂದರು.
ಪ್ರಮುಖರಾದ ರಾಜೇಶ್ ಕಾವೇರಿ, ಕಾಡೂರು ಸುರೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸಂಪತ್ ಕುಮಾರ್ ಶೆಟ್ಟಿ, ಸಬ್ಲಾಡಿ ಜಯರಾಮ ಶೆಟ್ಟಿ, ರಮೇಶ ಶೆಟ್ಟಿ, ಅಲ್ತಾರು ಗೌತಮ್ ಹೆಗ್ಡೆ, ಮಡಾಮಕ್ಕಿ ಶಶಿಧರ ಶೆಟ್ಟಿ, ರೂಪಾ ಪೈ, ಶ್ರೀಲತಾ ಸುರೇಶ್ ಶೆಟ್ಟಿ, ತಾಪಂ ಇಒ ಭಾರತಿ, ಪುರಸಭೆ ಸದಸ್ಯರು, ಗ್ರಾಪಂ ಪ್ರತಿನಿಧಿಗಳು ಇದ್ದರು.
ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿ, ಆಪ್ತ ಕಾರ್ಯದರ್ಶಿ ಮಹಿಮ್ ಶೆಟ್ಟಿ ನಿರೂಪಿಸಿದರು.