'ಮದ್ಯ ಮುಕ್ತ ಕರ್ನಾಟಕ' ಗ್ಯಾರೆಂಟಿ ಆಗಲಿ: ಎಸ್‌ವೈಎಸ್

Update: 2023-07-15 14:45 GMT

ಮಂಗಳೂರು: ನಮ್ಮ ಸರ್ಕಾರಗಳು ಜನರ ಏಳಿಗೆಗಾಗಿ ಎಷ್ಟೇ ಯೋಜನೆಗಳನ್ನು ಹಮ್ಮಿಕೊಂಡರೂ ದೇಶ ಇನ್ನೂ ಹಿಂದುಳಿದ ದೇಶಗಳ ಪಟ್ಟಿಯಲ್ಲೇ ಉಳಿಯಲು ಮುಖ್ಯ ಕಾರಣ ಮದ್ಯ ಮಾದಕಗಳು. ಕರ್ನಾಟಕ ಸರಕಾರವು ಐದು ಗ್ಯಾರಂಟಿಗಳ ಮೂಲಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿರುವುದು ಅಭಿನಂದನಾರ್ಹ. ಆದರೆ ಇದರ ಪ್ರಯೋಜನ ಪೂರ್ಣವಾಗಿ ಲಭಿಸಬೇಕಾದರೆ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮದ್ಯಮುಕ್ತ ಕರ್ನಾಟಕದ ಗ್ಯಾರಂಟಿಯನ್ನು ನೀಡಲು ಸರಕಾರ ಸಿದ್ಧವಾಗಬೇಕು ಎಂದು ಸುನ್ನೀ ಯುವಜನ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಖ್ ಆಗ್ರಹಿಸಿದರು.

ಎಸ್‌ವೈಎಸ್ ತಲಪಾಡಿ ಮತ್ತು ಕೋಟೆಕಾರ್ ಸರ್ಕಲ್ ಸಮಿತಿಗಳ ಆಶ್ರಯದಲ್ಲಿ ನಡೆದ ಮಾದಕ ವಿರೋಧಿ ಜಾಗೃತಿ ಜಾಥಾದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಭಾರತೀಯರ ಸರಾಸರಿ ಪ್ರಾಯ 28 ವರ್ಷವಾಗಿದ್ದು, ಜನಸಂಖ್ಯೆಯಲ್ಲಿ ಮೂರನೇ ಎರಡು ಭಾಗದಷ್ಟು ಜನರು 15 ರಿಂದ 65 ವರ್ಷ ನಡುವೆ ಇದ್ದಾರೆ. ಅಂದರೆ ಜಗತ್ತಿನಲ್ಲಿ ಅತ್ಯಂತ ಉತ್ಪಾದಕ ಶಕ್ತಿಯನ್ನು ಹೊಂದಿದ ಯುವ ರಾಷ್ಟ್ರಗಳಲ್ಲಿ ಒಂದಾಗಿ ಭಾರತವು ಪರಿಗಣಿಸಲ್ಪಟ್ಟಿದೆ. ಆದರೆ ತಂಬಾಕುವಿನಿಂದ ಹಿಡಿದು ಮದ್ಯದ ಮೂಲಕ ಮುಂದುವರಿದು ನಾನಾ ಬಗೆಯ ಮಾದಕ ದ್ರವ್ಯಗಳ ಮೂಲಕ ಆ ಯುವಶಕ್ತಿಯು ಅಪವ್ಯಯವಾಗುತ್ತಿದೆ. ಹೆತ್ತವರು ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾ ಅವರ ನಡೆನುಡಿಗಳನ್ನು ಗಮನಿಸುತ್ತಾ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಖ್ಯಾತ ವಾಗ್ಮಿ ಮಅರೂಫ್ ಸುಲ್ತಾನಿ ಆತೂರು ಮುಖ್ಯ ಭಾಷಣ ಮಾಡಿದರು. ಬಶೀರ್ ಅಹ್ಸನಿ ತೋಡಾರ್ ಸ್ವಾಗತಿಸಿ, ಎಎಚ್ ಸಿರಾಜ್ ವಂದಿಸಿದರು.

ಸುನ್ನೀ ಸಂಘಟನೆಗಳ ನಾಯಕರು ಹಾಗೂ ಸ್ಥಳೀಯ ಜಮಾಅತ್ ನೇತಾರರು ಭಾಗವಹಿಸಿದ್ದರು.

ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 14 ಮೊಹಲ್ಲಾಗಳಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಮನೆಗಳಿಗೆ ಕರಪತ್ರ ವಿತರಣೆ, ಯೂನಿಟ್ ಕನ್ವೆನ್ಷನ್, ಮಹಿಳಾ ಸಂಗಮ, ಲೀಡರ್ಸ್ ಮೀಟ್ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News