‘ಮದರೆಂಗಿದ ರಂಗ್’ ತುಳು ಬದುಕಿನ ವಿಶೇಷ ಕಾರ್ಯಕ್ರಮ
ಉಡುಪಿ: ಉಡುಪಿ ತುಳುಕೂಟದ ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಮದರೆಂಗಿದ ರಂಗ್’ ತುಳು ಬದುಕಿನ ವಿಶೇಷ ಕಾರ್ಯಕ್ರಮವನ್ನು ರವಿವಾರ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶ್ವೇತಾ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಶಿಕ್ಷಣದ ಜೊತೆ ನಮ್ಮ ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ಹೇಳಿಕೊಡುವ ಕಾರ್ಯವನ್ನು ಪೋಷಕರು ಮಾಡಬೇಕು. ಈ ಎಲ್ಲ ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಲ್ಲದೆ ಮಕ್ಕಳು ನಮ್ಮ ಭಾಷೆಯ ಮೇಲಿನ ಅಭಿಮಾನವನ್ನು ಕೂಡ ಬೆಳೆಸಬೇಕು ಎಂದು ತಿಳಿಸಿದರು.
ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿ ಕಾರಿ ಡಾ. ಜುನೈದಾ ಸುಲ್ತಾನ್ ಮಾತನಾಡಿದರು. ಈ ಸಂದರ್ಭದಲ್ಲಿ ಲೇಖಕಿ ವಾಸಂತಿ ಅಂಬಲಪಾಡಿ ಹಾಗೂ ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘದ ಸ್ಥಾಪಕ ಅಧ್ಯಕ್ಷೆ ಡಾ.ರಶ್ಮಿ ಅಮ್ಮೆಂಬಳ ಅವರನ್ನು ಸನ್ಮಾನಿ ಸಲಾಯಿತು. ತುಳು ಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಕಾರ್ಯ ಕ್ರಮದ ಸಂಚಾಲಕಿ ಯಶೋಧಾ ಕೇಶವ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ಪೀಂಪಿರಿ ಊದಿ ಸಂಭ್ರಮಿಸಿದ ಮಕ್ಕಳು!
ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಎಲೆಯಲ್ಲಿ ಮಾಡಿದ ಪೀಂ ಪಿರಿ ಊದುವ ಮತ್ತು ಹಲಸಿನ ಬೀಜದ ಸುಲಿಗೆ ತೆಗೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 6-10ನೆ ತರಗತಿಯ ಮಕ್ಕಳಿಗೆ ಮೆಹಂದಿ ಸ್ಪರ್ಧೆ, ಔಷಧಿಯ ಸಸ್ಯಗಳ ಎಲೆಯ ಹೆಸರು ತಿಳಿಸುವುದು, ತೆಂಗಿನ ಮರದ ಒಲಿಯಿಂದ ಆಟದ ವಸ್ತು ತಯಾರಿಸುವ ಸ್ಪರ್ಧೆಗಳು ನಡೆದವು.
ಕಾಲೇಜು ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆ, ಕೇಶಾಲಂಕಾರ, ಪುರುಷರಿಗೆ ಮುಂಡಾಸ್ ಕಟ್ಟುವುದು, ಮಹಿಳೆಯರಿಗೆ ಹೂವು ಕಟ್ಟುವ ಸ್ಫರ್ಧೆ ಮತ್ತು ಸಾರ್ವ ಜನಿಕರಿಗೆ ಮೆಹಂದಿ ಸ್ಪರ್ಧೆ, ಜಲ್ಲಿ ಬಿಡಿಸುವುದು, ಬತ್ತಿ ಕಟ್ಟುವುದು, ಹೂವು ಜೋಡಣೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಕ್ಕಳಿಂದ ಹಿರಿಯರವರೆಗೆ ಎಲ್ಲರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.