ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ
ಮಂಗಳೂರು, ಜು.12: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ -1(ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ 3 ವರ್ಷಗಳ ಸಜೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲುವಿನ ಸತೀಶ್ ಕುಲಾಲ್ ಶಿಕ್ಷೆಗೊಳಗಾದ ಆರೋಪಿ.
2019ರ ಆ.30ರಂದು ಸಂಜೆ ಬಾಲಕಿಯು ವಿಟ್ಲದಿಂದ ಬಸ್‌ನಲ್ಲಿ ಪ್ರಯಾಣಿಸಿ ಕೆದುವಾರು ಬಸ್ ತಂಗುದಾಣದ ಬಳಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಸೈ ಯಲ್ಲಪ್ಪ ಎಸ್. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಆರೋಪಿಗೆ ಪೊಕ್ಸೊ ಕಲಂ 8ರಡಿ 3 ವರ್ಷ ಸಜೆ, 10,000 ರೂ. ದಂಡ, ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಸಜೆ, ಐಪಿಸಿ ಕಲಂ 354ರಡಿ 1 ವರ್ಷ ಸಜೆ, 5,000 ರೂ.ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಜೆ, ಐಪಿಸಿ ಕಲಂ 506ರ ಅಡಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಬಾಲಕಿಗೆ 1 ಲ.ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.