ಮಂಗಳೂರು ವಿವಿ ಕಾಲೇಜು: ಎನ್‌ಎಸ್‌ಯುಐ ವಿರೋಧ ಲೆಕ್ಕಿಸದೆ ಬಲಪಂಥೀಯ ವ್ಯಕ್ತಿಯಿಂದ ಭಾಷಣ ಕಾರ್ಯಕ್ರಮ

Update: 2023-06-27 15:45 GMT

ಮಂಗಳೂರು, ಜೂ.27: ದ.ಕ.ಜಿಲ್ಲಾ ಎನ್‌ಎಸ್‌ಯುಐ ಸಂಘಟನೆಯ ವಿರೋಧದ ಮಧ್ಯೆಯೂ ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ಬಲಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಯ ಸಮ್ಮುಖ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಸಲಾಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಜೂ.23ರಂದು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿರುವ ಶ್ರೀಕಾಂತ್ ಶೆಟ್ಟಿ ಎಂಬ ವ್ಯಕ್ತಿಯನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಎನ್‌ಎಸ್‌ಯುಐ ದ.ಕ. ಜಿಲ್ಲಾ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮಂಗಳೂರು ವಿವಿ ಕುಲಪತಿಗೆ ಮನವಿ ಸಲ್ಲಿಸಿತ್ತು.

ಮತೀಯ ದ್ವೇಷ ಹರಡುವ ಶ್ರೀಕಾಂತ್ ಶೆಟ್ಟಿಯನ್ನು ಸರಕಾರಿ ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಆಹ್ವಾನಿಸಬಾರದು ಎಂದು ಒತ್ತಾಯಿಸಿತ್ತು. ಆದರೆ ಅದಕ್ಕೆ ಸೂಕ್ತ ರೀತಿಯ ಸ್ಪಂದನ ಸಿಗದ ಕಾರಣ ದ.ಕ. ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಎನ್‌ಎಸ್‌ಯುಐ ನಿಯೋಗ ದೂರು ನೀಡಿತ್ತು.

ಆ ಬಳಿಕದ ಬೆಳವಣಿಗೆ ಎಂಬಂತೆ ಜೂ.23 ಮತ್ತು 24ರಂದು ನಡೆಸಲು ಉದ್ದೇಶಿಸಲಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದರು. ಆದರೆ ಮಂಗಳವಾರ ಕಾಲೇಜಿನಲ್ಲಿ ಶ್ರೀಕಾಂತ್ ಶೆಟ್ಟಿಯನ್ನು ಅತಿಥಿಯನ್ನಾಗಿ ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಎನ್‌ಎಸ್‌ಯುಐ ಸಂಘಟನೆಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ‘ ಮತೀಯ ದ್ವೇಷ ಕಾರುವ ಶ್ರೀಕಾಂತ್ ಶೆಟ್ಟಿಯನ್ನು ಅತಿಥಿಯಾಗಿ ಆಹ್ವಾನಿಸಬಾರದೆಂದು ನಾವು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೆವು. ಕಾರ್ಯಕ್ರಮ ನಡೆಸದಂತೆ ಜಿಲ್ಲಾಧಿಕಾರಿ ಕೂಡ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕೆ ಕಾಲೇಜಿನ ಪ್ರಾಂಶುಪಾಲರೇ ನೇರ ಹೊಣೆ. ಹಾಗಾಗಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಪ್ರಮುಖರಿಗೆ ಮನವಿ ಸಲ್ಲಿಸಲಾಗುವುದು. ಪ್ರಾಂಶುಪಾಲರನ್ನು ಬದಲಾಯಿಸುವವರೆಗೆ ಹೋರಾಟ ಮುಂದುವರಿಸಲಾಗುವುದು’ ಎಂದು ತಿಳಿಸಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News