ಮಂಗಳೂರು: ಪತ್ನಿಯನ್ನು ಕೊಂದ ಆರೋಪ ಸಾಬೀತು; ಪತಿಗೆ ಕಠಿಣ ಶಿಕ್ಷೆ, ದಂಡ
ಮಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ತನ್ನ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾದ ಆರೋಪಿ ಪತಿಗೆ 7 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ವಿಧಿಸಿ ತೀರ್ಪು ನೀಡಿದೆ.
ಧರ್ಮಸ್ಥಳದ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಜಾನ್ಸನ್ ಕೆ.ಎಂ. (41) ಶಿಕ್ಷೆಗೊಳಗಾದ ಆರೋಪಿ.
2021ರ ಜ.7ರಂದು ರಾತ್ರಿ ಜಾನ್ಸನ್ ತನ್ನ ಪತ್ನಿ ಸೌಮ್ಯ ಫ್ರಾನ್ಸಿಸ್ (36) ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆಗೈದಿದ್ದ. ಗಂಭೀರ ಗಾಯಗೊಂಡ ಸೌಮ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸೌಮ್ಯರ ಸಹೋದರ ಸನೋಜ್ ಫ್ರಾನ್ಸಿಸ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 498(ಎ) ಹಾಗೂ 302ರನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಳಿಕ ಈ ಪ್ರಕರಣವನ್ನು ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತು.
ಪ್ರಕರಣಕ್ಕೆ ಸಂಬಂಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ ಸಮಗ್ರ ವಿಚಾರಣೆ ನಡೆಸಿ ಐಪಿಸಿ 498 (ಎ) ರಡಿ 3 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಜೆ, ಐಪಿಸಿ 302ರಡಿ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಸಾದಾ ಸಜೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ಆರೋಪಿಯು ಏಕಕಾಲಕ್ಕೆ ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಡಾ. ಸೂರಜ್ ಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.